ಬೆಂಗಳೂರು: ರಾಜ್ಯಕ್ಕೆ ಅಮಿತ್ ಶಾ ಭೇಟಿ ಕೊಟ್ಟ ನಂತರ ರಾಜ್ಯ ಬಿಜೆಪಿಯಲ್ಲಿ ಸಣ್ಣ ಬದಲಾವಣೆ ಕಂಡುಬಂದಿದೆ. ಜೆಡಿಎಸ್ ಜೊತೆಗಿನ ಮೃದು ಧೋರಣೆಗೆ ಗುಡ್ ಬೈ ಹೇಳಲಾಗಿದೆ. ಪರಿಣಾಮ ಉಭಯ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇದಕ್ಕೆ ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಕಾರಣ ಎನ್ನುವ ಮಾತುಗಳು ಕೇಸರಿ ಪಾಳೆಯದಿಂದಲೇ ಕೇಳಿ ಬರುತ್ತಿವೆ.
ಹೌದು, ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದಿದ್ದ ಹೈವೋಲ್ಟೇಜ್ ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆ ವಿಷಯದಲ್ಲಿ ಅಮಿತ್ ಶಾ ಸ್ಪಷ್ಟ ಸಂದೇಶವನ್ನು ರಾಜ್ಯ ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಇಲ್ಲ, ಬಿಜೆಪಿ ಸ್ವತಂತ್ರವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವ ಕಡೆ ಮಾತ್ರ ರಾಜ್ಯ ನಾಯಕರು ಗಮನ ಹರಿಸಬೇಕು. ಮೈತ್ರಿಯಂತಹ ಚಿಂತನೆ ಮಾಡಿಕೊಂಡು ಕಾಲಹರಣ ಮಾಡಬೇಡಿ ಎನ್ನುವ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ನಡುವೆ ಒಂದು ರೀತಿಯ ಸಾಫ್ಟ್ ಕಾರ್ನರ್ ವಾತಾವರಣ ಸೃಷ್ಟಿಯಾಗಿತ್ತು. ಬಜೆಟ್ ಅಧಿವೇಶನದಲ್ಲಿಯೂ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಪ್ರತಿಪಕ್ಷಗಳ ಸಾಲಿನಲ್ಲಿದ್ದರೂ ಆಡಳಿತಾರೂಢ ಬಿಜೆಪಿ ಬದಲು ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು. ಒಂದು ರೀತಿಯಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಸದನದಲ್ಲಿ ಕದನ ನಡೆದ ರೀತಿಯ ವಾತಾವರಣ ಇತ್ತು. ಬಿಜೆಪಿ ಕೂಡ ಜೆಡಿಎಸ್ ಬಗ್ಗೆ ಟೀಕಿಸದೆ ಕೇವಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿತ್ತು.
ಇದರ ಜೊತೆಗೆ ವಿಧಾನ ಪರಿಷತ್ನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ಮಾಡಿಕೊಂಡಿದ್ದು, ಅತಿ ದೊಡ್ಡ ಪಕ್ಷವಾಗಿದ್ದರೂ ಬಿಜೆಪಿ ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಇದಕ್ಕೂ ಮೊದಲ ಮೇಕೆದಾಟು ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಸಾಕಷ್ಟು ವಿಷಯಗಳನ್ನು ಕಾಂಗ್ರೆಸ್ ಮುಂದಿಟ್ಟು ತರಾಟೆ ತೆಗೆದುಕೊಂಡಿದ್ದರು. ಇದೆಲ್ಲಾ ಬಿಜೆಪಿಗೆ ಪ್ಲಸ್ ಆಗುವ ರೀತಿಯ ವಾತಾವರಣ ಸೃಷ್ಟಿಸಿತ್ತು.
ಈ ಎಲ್ಲಾ ಬೆಳವಣಿಗೆಗಳು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಚುನಾವಣೆಗೆ ಹೋಗಲಿವೆ ಎನ್ನುವ ಮಾತುಗಳ ಸೃಷ್ಟಿಗೆ ಕಾರಣವಾಗಿತ್ತು. ನಂತರ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳಲಿವೆ ಎನ್ನುವ ವಿಷಯ ತೀವ್ರ ಚರ್ಚೆಗೆ ಬಂದಿದೆ. ಇದರ ನಡುವೆ ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ ಮರುದಿನವೇ ಬಿಜೆಪಿಯ ವರಸೆ ಬದಲಾಗಿದೆ. ಜೆಡಿಎಸ್ ಕೂಡ ಕೌಂಟರ್ ನೀಡಿದೆ.