ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಬಿಎಂಸಿಆರ್ಐ, ವಿಕ್ಟೋರಿಯಾ, ಕಿಮ್ಸ್ ಹಾಗೂ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳಿಗೆ ಸಚಿವ ಸುಧಾಕರ್ ಭೇಟಿ ನೀಡಿ, ಕೋವಿಡ್ ಚಿಕಿತ್ಸೆ ಹಾಗೂ ಇತರ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಮಾತಾನಾಡಿದ ಅವರು, ಇಲ್ಲಿಯವರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 400 ಹಾಸಿಗೆ ಕೊಟ್ಟಿದ್ದರು, ಮುಖ್ಯಮಂತ್ರಿಗಳ ನಿರ್ದೇಶನದ ಪ್ರಕಾರ ಇಂದು ಆಸ್ಪತ್ರೆಗೆ ಭೇಟಿ ಕೊಟ್ಟು ಒಟ್ಟಾರೆ, 750 ಹಾಸಿಗೆಗಳನ್ನ ಮೀಸಲಿಡಲು ನಿರ್ದೇಶನ ನೀಡಲಾಗಿದೆ. ಹಾಗೇ ಹತ್ತಿರದ ಎರಡು ಹೋಟೆಲ್ಗಳನ್ನ ಪರ್ಯಾಯ ಆಸ್ಪತ್ರೆಯಾಗಿ ಮಾಡಲು ಸೂಚನೆ ನೀಡಲಾಗಿದೆ. ಅಲ್ಲಿ ರೋಗ ಲಕ್ಷಣ ಇಲ್ಲದೇ ಇರುವವರಿಗೆ 200 ಹಾಸಿಗೆ ಮೀಸಲಿಡಲಾಗುವುದು, ಈ ಮೂಲಕ 950 ಹಾಸಿಗೆ ವ್ಯವಸ್ಥೆಯನ್ನು ಬಿಎಂಸಿಆರ್ಐ ನೋಡಿಕೊಳ್ಳಲಿದೆ. ಹಾಗೇ ಐಸಿಯು ಬೆಡ್ಗಳು 70 ಇದ್ದು ಇದನ್ನ ಹೆಚ್ಚು ಮಾಡಲು ಮುಂದಿನ 15 ದಿನಗಳಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಸಿಎಂಗೆ ಕೊರೊನಾ
ಬೆಳಗ್ಗೆ ನಮ್ಮೊಟ್ಟಿಗೆ ಸಭೆ ನಡೆಸಿದಾಗ ಸಿಎಂ ಚೆನ್ನಾಗಿಯೇ ಇದ್ದರು. ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು, ಆರೋಗ್ಯ ಇಲಾಖೆಯ ಎಸಿಎಸ್, ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಸಭೆಯಲ್ಲಿ ಭಾಗಿಯಾಗಿ ಚರ್ಚೆ ಮಾಡಿದ್ದವು. ಆಂತರಿಕ ಅಂತರ ಕಾಪಾಡಿಕೊಂಡು ಬಂದಿದ್ದೇವೆ. ಎರಡನೇ ಬಾರಿ ಮುಖ್ಯಮಂತ್ರಿಗಳಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಚುನಾವಣಾ ಪ್ರಚಾರಕ್ಕೆ ಹೋದಂತ ಸಂದರ್ಭದಲ್ಲಿ ಸೋಂಕು ಬಂದಿರಬಹುದು. ನಾನು ಅವ್ರು ಜೊತೆಯಲ್ಲೇ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೆವು. ಇಂದು ಮುಂಜಾನೆಯು ಕೇಳಿದ್ದರೂ, ಎರಡನೇ ಡೋಸ್ ಯಾವಾಗ ಅಂತ, ಆಗ ಎರಡು ದಿನದಲ್ಲಿ ಹಾಕಿಸಿಕೊಳ್ಳೋಣಾ ಎಂದು ಹೇಳಿದ್ದೆ. ಅಷ್ಟರಲ್ಲಿ ಪಾಸಿಟಿವ್ ದೃಢಪಟ್ಟಿದೆ, ಆದಷ್ಟು ಬೇಗ ಗುಣಮುಖರಾಗಲಿ ಎಂದರು.