ಬೆಂಗಳೂರು:ಕೊರೊನಾ ವೈರಸ್ ಎರಡನೇ ಅಲೆಯ ಭೀತಿ ಹಾಗೂ ಸರ್ಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಘೋಷಣೆ ಹಿನ್ನೆಲೆ ರಾಜಧಾನಿ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದೆ. ಇದರ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ಗಳಿಗೆ ಅನಿರೀಕ್ಷಿತ ಡಿಮ್ಯಾಂಡ್ ಉಂಟಾಗಿದೆ.
ಸಾರಿಗೆ ಮುಷ್ಕರದ ನಂತರ ಕಳೆದೊಂದು ವಾರದಿಂದ ಕೆಎಸ್ ಆರ್‌ಟಿಸಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿತವಾಗಿ ಭಾರಿ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬೆಳಗ್ಗೆಯಿಂದಲೇ ಬೆಂಗಳೂರು ನಗರದಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿ ಹಾಗೂ ತಿರುಪತಿ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಶೇ. 100ರಷ್ಟು ಭರ್ತಿಯಾಗಿದ್ದವು. ಇನ್ನು ಮೈಸೂರು, ಶಿವಮೊಗ್ಗ, ದಾವಣಗೆರೆ ಮಾರ್ಗದಲ್ಲಿ ಸಂಚರಿಸುವ ನಿಗದಿತ ಬಸ್‌ಗಳು ಭರ್ತಿಯಾಗಿದ್ದರಿಂದ ಈ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಲಾಗಿದೆ.