ಬೆಂಗಳೂರು: ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಇಂದು ಆಡಳಿತ ಹಾಗೂ ವಿಪಕ್ಷ ಕಾಂಗ್ರೆಸ್ ನಡುವಿನ ಭಾರಿ ವಾಗ್ವಾದಕ್ಕೆ ಕಾರಣವಾಯಿತು. ಜನರ ಸಮಸ್ಯೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು.
ಜನರ ಸಮಸ್ಯೆಗಳ ಚರ್ಚೆಗೆ ಆಗ್ರಹಿಸಿ ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ; ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು, ಯಾವುದೇ ಕಾರಣಕ್ಕೂ ಬಾವಿಗಿಳಿದು ಧರಣಿ ಮಾಡಬಾರದು ಎಂದು ತೀರ್ಮಾನ ಮಾಡಿದ್ದೆವು. ಉತ್ತರ ಸಮಾಧಾನ ತಂದಿಲ್ಲ ಎಂದರೆ ವಾಕೌಟ್ ಮಾಡಬೇಕು ಎಂದು ನಿರ್ಧರಿಸಿದ್ದೆವು. ಕೆಲವು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಹೀಗಾಗಿ ಕಲಾಪವನ್ನು 1 ವಾರ ವಿಸ್ತರಿಸುವಂತೆ ಸಿಎಂ, ಸ್ಪೀಕರ್ ಅವರಲ್ಲಿ ಪರಿ ಪರಿಯಾಗಿ ಬೇಡಿಕೊಂಡಿದ್ದೇವೆ. ಆದರೂ ನಮಗೆ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಎನ್ಇಪಿ ಬಗ್ಗೆ ಸರಿಯಾದ ಚರ್ಚೆ ಆಗಿಲ್ಲ ಎಂದು ಕಾಂಗ್ರೆಸ್ ಆಕ್ರೋಶ
ನೀವು ಸರ್ಕಾರದ ಬ್ಯುಸಿನೆಸ್ ಎಲ್ಲವನ್ನು ಮಾಡಿಕೊಂಡಿದ್ದೀರಿ. ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ಇಂದು ನಾನು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡಬೇಕಿತ್ತು. ತುಂಬಾ ಮುಖ್ಯವಾದ ವಿಷಯ ಅದು. ಅಕ್ಟೋಬರ್ 1 ರಿಂದ ಕಾಲೇಜುಗಳು ಆರಂಭವಾಗುತ್ತಿವೆ. ಇಡೀ ದೇಶದಲ್ಲಿ ಹೊಸ ಶಿಕ್ಷಣ ನೀತಿ ಆರಂಭವಾಗಿಲ್ಲ. ಆದರೆ, ಕರ್ನಾಟಕದಲ್ಲಿ ಆರಂಭಿಸಿದ್ದೀರಿ. ಮಕ್ಕಳ ಭವಿಷ್ಯದ ಬಗ್ಗೆ ಚರ್ಚೆ ಮಾಡಬೇಕು. ನಾಗ್ಪುರ್ ಎಜುಕೇಷನ್ ಪಾಲಿಸಿ ಬಗ್ಗೆ ಚರ್ಚೆ ಆಗಬೇಕು ಎಂದರು. ಇದಕ್ಕೆ ಸಿಟ್ಟಾದ ಆಡಳಿತ ಪಕ್ಷದ ಸದಸ್ಯರು ರೋಮ್, ಇಟಲಿ ಪಾಲಿಸಿ ಅಲ್ಲ ಎಂದು ಕೂಗಿದರು.
ಗದ್ದಲದ ನಡುವೆಯೇ ಮಾತನಾಡಿದ ಸಿಎಂ ಬೊಮ್ಮಾಯಿ
ಗದ್ದಲದ ನಡುವೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಷ್ಟ್ರ, ರಾಷ್ಟ್ರೀಯತೆ, ಆರ್‌ಎಸ್‌ಎಸ್ ಇವೆಲ್ಲಾ ಒಂದೇ. ಆರ್‌ಎಸ್‌ಎಸ್ ಅಂದ್ರೆ ರಾಷ್ಟ್ರೀಯತೆ. ರಾಷ್ಟ್ರೀಯ ಶಿಕ್ಷಣ ಪಾಲಿಸಿ, ಆರ್‌ಎಸ್‌ಎಸ್ ಇದ್ರೂ ತಪ್ಪಿಲ್ಲ. 21ನೇ ಶತಮಾನಕ್ಕೆ ನಮ್ಮ ಮಕ್ಕಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧಮಾಡಲು ವಿಫುಲವಾದ ಅವಕಾಶವನ್ನು ಹೊಸ ಶಿಕ್ಷಣ ನೀತಿ ನೀಡುತ್ತದೆ ಎಂದು ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಆರ್‌ಎಸ್‌ಎಸ್ ಶಿಕ್ಷಣ ಪಾಲಿಸಿ ಅಂತಲೇ ಕರೆಯಲಿ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧವ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ - ಕೋಲಾಹಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ ಅವರು ವಿಧಾನಸಭೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.