ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗ ಸಿ.ಎಂ. ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಸನ್ನಿಹಿತ?.. ಜೆಡಿಎಸ್ ವರಿಷ್ಠರ ತಂತ್ರಗಾರಿಕೆ ಏನು?

ಕಾಂಗ್ರೆಸ್​​ನಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಬೇಸರಗೊಂಡಿರುವ ಸಿ.ಎಂ. ಇಬ್ರಾಹಿಂ, ಮತ್ತೆ ಜೆಡಿಎಸ್​​ಗೆ ಸೇರಲು ನಿರ್ಧರಿಸಿದ್ದಾರೆ. ಜಾತ್ಯತೀತ ಜನತಾದಳಕ್ಕೆ ಬಂದು ಪಕ್ಷದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Congress Leader c m ibrahim likely to return JDS
Congress Leader c m ibrahim likely to return JDS

By

Published : Sep 25, 2021, 1:26 PM IST

ಬೆಂಗಳೂರು: ಜೆಡಿಎಸ್​​ನಲ್ಲಿ ಹಲವು ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಅಥವಾ ಬಿಜೆಪಿಗೆ ವಲಸೆ ಹೋಗಲು ಸಿದ್ದತೆ ಮಾಡಿಕೊಳ್ಳುತ್ತಿದ್ದರೂ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜೆಡಿಎಸ್ ವರಿಷ್ಠರು ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ದಾಳ ಹೂಡಿರುವ ಜೆಡಿಎಸ್, ಕಾಂಗ್ರೆಸ್​​ನಲ್ಲಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಇದರ ಜೊತೆಗೆ ಜೆಡಿಎಸ್​​ನಲ್ಲೇ ಇದ್ದು, ಅಧಿಕಾರ ಅನುಭವಿಸಿ ಕಾಂಗ್ರೆಸ್​ಗೆ ಜಿಗಿದ ಜಮೀರ್ ಅಹಮದ್ ಖಾನ್ ಅವರಿಗೆ ತಿರುಗೇಟು ನೀಡಲು ವರಿಷ್ಠರು ಈ ಲೆಕ್ಕಾಚಾರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಸೇರಿದ್ದ ಇಬ್ರಾಹಿಂ

ಜನತಾ ಪರಿವಾರದಲ್ಲಿಯೇ ಇದ್ದ ಸಿ.ಎಂ. ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಹಾಗಾಗಿ, ಸಿದ್ದರಾಮಯ್ಯ ಜೆಡಿಎಸ್ ಬಿಟ್ಟಾಗ, ಇಬ್ರಾಹಿಂ ಸಹ ಅವರ ಜೊತೆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್​​ನಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಬೇಸರಗೊಂಡಿರುವ ಇಬ್ರಾಹಿಂ, ಮತ್ತೆ ಜೆಡಿಎಸ್​​ಗೆ ಸೇರಲು ನಿರ್ಧರಿಸಿದ್ದಾರೆ. ಜಾತ್ಯತೀತ ಜನತಾದಳಕ್ಕೆ ಬಂದು ಪಕ್ಷದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಇಬ್ರಾಹಿಂ ಜೆಡಿಎಸ್​​ ಸೇರ್ಪಡೆಯಾಗಿ, ಪಕ್ಷದ ಅಧ್ಯಕ್ಷ ಪಟ್ಟ ಅಲಂಕರಿಸಿದರೆ ಆ ಮೂಲಕ ಕರಾವಳಿ, ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರ ಇದೆ. ಅಲ್ಲದೇ, ಜನತಾ ಪರಿವಾರದ ಹಳೇ ನಾಯಕರನ್ನು ಒಂದೆಡೆ ಸೇರಿಸಿ, ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಚುನಾವಣೆ ಎದುರಿಸಬಹುದು ಎನ್ನುವುದು ಜೆಡಿಎಸ್ ವರಿಷ್ಠರ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ಅಪ್ಪಾಜಿ ಗೌಡರ ಪುಣ್ಯಸ್ಮರಣೆ ವೇಳೆ ಜೆಡಿಎಸ್​ ಸೇರುವ ಇಂಗಿತ ವ್ಯಕ್ತಪಡಿಸಿದ ಸಿಎಂ ಇಬ್ರಾಹಿಂ

ಒಂದು ವರ್ಷದ ಹಿಂದೆಯೇ ಸಿ.ಎಂ. ಇಬ್ರಾಹಿಂ ಪಕ್ಷ ಬಿಟ್ಟು ಜೆಡಿಎಸ್ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ನಂತರ ಸ್ವತಃ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಇಬ್ರಾಹಿಂ ಅವರನ್ನು ಮನವೊಲಿಸಿ ಪಕ್ಷದಲ್ಲಿ ಉಳಿಸಿಕೊಂಡಿದ್ದರು. ಕಳೆದ ವರ್ಷ ಡಿಸೆಂಬರ್​ನಲ್ಲಿ ಕುಮಾರಸ್ವಾಮಿ ಅವರು, ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಬರಲು ಆಹ್ವಾನಿಸಿದ್ದರು. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಸಹ ನಿವಾಸದಲ್ಲಿ ಭೇಟಿದ ಇಬ್ರಾಹಿಂ ಮಾತುಕತೆ ನಡೆಸಿದ್ದರು.

ಜೆಡಿಎಸ್ ಅಧ್ಯಕ್ಷರಾಗ್ತಾರಾ ಇಬ್ರಾಹಿಂ?

ಇದೀಗ ಈ ಪ್ರತಿಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದ್ದು, ಮೂರು ದಿನಗಳ ಹಿಂದೆ ಬಿಡದಿಯ ತೋಟದ ಮನೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಇಬ್ರಾಹಿಂ ಈ ಕುರಿತು ಮಹತ್ವದ ಸಭೆ ನಡೆಸಿದ್ದಾರೆ. ಇಬ್ರಾಹಿಂ ಅವರನ್ನು ಪಕ್ಷಕ್ಕೆ ಸೇರ್ಪಡೆ ಕುರಿತು ಮಾತುಕತೆ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಇಬ್ರಾಹಿಂ ಅವರಿಗೆ ನೀಡುವ ಕುರಿತು ಸಹ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಕುಮಾರಸ್ವಾಮಿ ಕೈ ಬಲಪಡಿಸಬೇಕಿದೆ. ಇಂದಿನಿಂದ ಶುಭಕಾಲ ಆರಂಭವಾಗಿದೆ ಎಂದು ಭದ್ರಾವತಿ ತಾಲೂಕು ಗೋಣಿಬೀಡಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಇಬ್ರಾಹಿಂ ಹೇಳಿದ್ದರು.

ನವೆಂಬರ್​ನಲ್ಲಿ ಇಬ್ರಾಹಿಂ ರಾಜೀನಾಮೆ ಸಾಧ್ಯತೆ?

ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಇಬ್ರಾಹಿಂ ನವೆಂಬರ್​ನಲ್ಲಿ ವಿಧಾನಪರಿಷತ್ ಸದಸ್ಯತ್ವ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆನಂತರ, ಅವರು ಅಧಿಕೃತವಾಗಿ ಜೆಡಿಎಸ್ ಸೇರ್ಪೆಡೆಯಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಒಟ್ಟಾರೆ, ಇಬ್ರಾಹಿಂ ಅವರ ಇತ್ತೀಚೆಗಿನ ನಡೆ ಗಮನಿಸಿದರೆ ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರ್ಪಡೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

ABOUT THE AUTHOR

...view details