ಬೆಂಗಳೂರು:ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ, ಗಲಭೆಗಳಿಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮಾಹಿತಿ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯ ಸಿಎಂ ನಿವಾಸ ಧವಳಗಿರಿಗೆ ಗುಪ್ತಚರ ಇಲಾಖೆ ಎಡಿಜಿಪಿ ಕಮಲ್ ಪಂತ್ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ರಾಜ್ಯಾದ್ಯಂತ ಭುಗಿಲೇಳುತ್ತಿರುವ ಪ್ರತಿಭಟನೆ ಕಾವು ಕುರಿತು ವಿವರಿಸಿದರು.
ಸಿಎಂ ಜೊತೆ ಸಭೆಗೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ, ಮಂಗಳೂರಿನಲ್ಲಿ ಇಬ್ಬರು ಗುಂಡೇಟಿಗೆ ಬಲಿಯಾದ ನಂತರದ ಪರಿಸ್ಥಿತಿ ಹಾಗೂ ಮಂಗಳೂರು, ಕಲಬುರಗಿ ಸೇರಿದಂತೆ ಹಲವು ಸೂಕ್ಷ್ಮ ಜಿಲ್ಲೆಗಳಲ್ಲಿನ ಸದ್ಯದ ಪರಿಸ್ಥಿತಿ ಕುರಿತ ಗುಪ್ತಚರ ಮಾಹಿತಿಯನ್ನು ಮುಖ್ಯಮಂತ್ರಿ ಬಿಎಸ್ವೈಗೆ ಕಮಲ್ ಪಂತ್ ನೀಡಿದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗಿನ ನಡೆದ ಘಟನೆಗಳಿಗೆ ಸಂಬಂಧಿಸಿದ ಹಾಗೂ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡಿರುವ ಕುರಿತು ಮಾಹಿತಿ ನೀಡಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದ ನಂತರ ಕಮಲ್ ಪಂತ್ ಹಾಗೂ ಭಾಸ್ಕರ್ ರಾವ್ ಅವರನ್ನು ನಿವಾಸಕ್ಕೆ ಕರೆಸಿಕೊಂಡು ಗೃಹ ಸಚಿವರ ಸಮ್ಮುಖದಲ್ಲೇ ಸಿಎಂ ಚರ್ಚೆ ನಡೆಸಿದರು. ನಂತರ ಡಿಜಿಪಿ ನೀಲಮಣಿ ರಾಜು ಅವರ ಜೊತೆ ದೂರವಾಣಿ ಮೂಲಕವೇ ಸಂಪರ್ಕಿಸಿ ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.