ಬೆಂಗಳೂರು : ನಾನು ಸಂತೋಷವಾಗಿ ಮುಖ್ಯಮಂತ್ರಿ ಹುದ್ದೆ ತೊರೆಯುತ್ತೇನೆ. ನಾನು ಅಧಿಕಾರಕ್ಕೆ ಅಂಟಿ ಕುಳಿತಿಲ್ಲ. ನಾನು ವಚನ ಭ್ರಷ್ಟನಲ್ಲ. ಬಿಜೆಪಿ ನಾಯಕರು ಪದೇ ಪದೇ ಈ ಪದ ಬಳಸಬೇಡಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣ ವಾಗಿ ನುಡಿದಿದ್ದಾರೆ.
ಸಿಎಂ ಕುಮಾರಸ್ವಾಮಿಯ ವಿದಾಯದ ಭಾಷಣದ ಮುಂಖ್ಯಾಶಗಳು:
- ವಿಧಾನಸಭೆಯಲ್ಲಿ ಇಂದು ವಿಶ್ವಾಸಮತಯಾಚನೆ ಚರ್ಚೆ ಮೇಲೆ ಭಾಷಣ ಮಾಡಿದ ಅವರು, ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಮಾಧ್ಯಮಗಳು ಸರ್ಕಾರಕ್ಕೆ ಗಡುವು ನೀಡಿದ್ದವು ಎಂದರು
- ರೈತರ ಸಾಲ ಮನ್ನಾಕ್ಕೆ 25 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಸಾಲಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರ ಹುಡುಗಾಟ ಮಾಡಿಲ್ಲ. 1750 ಕೋಟಿ ರೂ.ಗಳನ್ನು ರಾಷ್ಟ್ರೀಯ ಬ್ಯಾಂಕ್ ಗಳ ಸಾಲಮನ್ನಾಕ್ಕೆ ಕೊಡಲಾಗಿದೆ ಎಂದು ಹೇಳಿದರು
- ನಾನು ಗುಡಿಸಲಿನಲ್ಲೂ ವಾಸಿಸುತ್ತೇನೆ. ವೆಸ್ಟ್ ಎಂಡ್ ಹೋಟೆಲ್ನಲ್ಲಿ ಒಂದು ರೂಮ್ ಮಾಡಿದ್ದೇನೆ. ಆ ರೂಮ್ ನನಗೆ ಅದೃಷ್ಟ ತಂದಿದೆ. ಹೀಗಾಗಿ ಅಲ್ಲಿದ್ದೇನೆಯೇ ಹೊರತು ಲೂಟಿ ಮಾಡಲು ಅಲ್ಲ ಎಂದು ಎದುರಾಳಿಗಳಿಗೆ ತಿರುಗೇಟು ನೀಡಿದರು.
- ತಾಜ್ ವೆಸ್ಟ್ ಎಂಡ್ ಹೋಟೆಲ್ ರೂಮ್ನಲ್ಲಿ ಟಿವಿ ನೋಡತ್ತಾ ಇದ್ದಾಗ ನಿಮಗೆ ನಮ್ಮ ಪಕ್ಷ ಬೆಂಬಲ ಅಂತಾ ಗುಲಾಮ್ ನಬಿ ಫೋನ್ ಮಾಡಿದ್ರು ,ಆದ್ದರಿಂದ ಅದೃಷ್ಟದ ರೂಮ್ ಅಂತಾ ಮುಂದುವರಿಸಿದೆ.
- ಇನ್ನು ನಾನು ಸರ್ಕಾರಿ ವಾಹನ ಬಳಸಿಲ್ಲ. ಪೆಟ್ರೋಲ್ ಸಹ ನನ್ನ ಹಣದಲ್ಲಿ ಖರೀದಿಸಿದ್ದೇನೆ ಎಂದರು.
- ಕೇಂದ್ರ ಸರ್ಕಾರದಿಂದ ಮೈತ್ರಿ ಸರ್ಕಾರಕ್ಕೆ ಸಹಕಾರ ದೊರೆತಿಲ್ಲ. 35 ಲಕ್ಷ ರೈತರ ಮಾಹಿತಿಯನ್ನು ಕಿಸಾನ್ ಸಮ್ಮಾನ್ ಯೋಜನೆಗೆ ನೀಡಿದ್ದೇವೆ. 15 ಲಕ್ಷ ರೈತರಿಗೆ ಕೇವಲ 500-600 ಕೋಟಿ ರೂ. ಹಣ ಬಂದಿದೆ ಎಂದ ಸಿಎಂ, ನನ್ನ ಸರ್ಕಾರ ನಿರ್ಲಕ್ಷ್ಯ ಸರ್ಕಾರವಲ್ಲ. ಕೊಡಗು ಪ್ರವಾಹಕ್ಕೆ ನಮ್ಮ ಸರ್ಕಾರ ಸೂಕ್ತವಾಗಿ ನಿರ್ವಹಣೆ ಮಾಡಿದ್ದೇವೆ. ನಮ್ಮದು ಜನಪರ ಸರ್ಕಾರವೇ ಹೊರತು ಕುಂಭಕರ್ಣ ನಿದ್ರೆಯಲ್ಲಿದ್ದ ಸರ್ಕಾರವಲ್ಲ ಎಂದು ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.
- ಯಡಿಯೂರಪ್ಪ ನನಗೆ ಮಾತ್ರವಲ್ಲ ಸದಾನಂದಗೌಡ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಕಿರುಕುಳ ನೀಡಿ ಶಾಸಕರನ್ನು ರೆಸಾರ್ಟ್ಗೆ ಕಳುಹಿಸಿದ್ದರು. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರ ಹೆಸರು ಉಲ್ಲೇಖಿಸಿದ ಸಿಎಂ ಕುಮಾರಸ್ವಾಮಿ ಅವರು, ಕೊಡಗು ಜಿಲ್ಲೆ ಜನ ನಮಗೆ ಮತ ಹಾಕಿಲ್ಲ ಅಂತಾ ಯೋಚನೆ ಮಾಡದೇ ಅಭಿವೃದ್ಧಿ ಕೆಲಸ ಮಾಡಿದೆ ನಮ್ಮ ಸರ್ಕಾರ. ಕೊಡಗಿನಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿದ್ದೇವೆ. ಮನೆ ನಿರ್ಮಾಣ ಆಗದಿದ್ದವರಿಗೆ ಪ್ರತೀ ತಿಂಗಳು ಹತ್ತು ಸಾವಿರ ಬಾಡಿಗೆ ಕಟ್ಟುತ್ತಿದ್ದೇವೆ.
- ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
- ರೇವಣ್ಣ ಅಮಾಯಕ:ಹೆಚ್.ಡಿ. ರೇವಣ್ಞ ಅಮಾಯಕ. ದೇವಸ್ಥಾನದಲ್ಲಿ ಕೊಟ್ಟ ನಿಂಬೆಹಣ್ಣು ಹಿಡಿದುಕೊಂಡಿರುವುದನ್ನು ಮಾಧ್ಯಮಗಳು ವೈಭವೀಕರಿಸಿವೆ ಎಂದು ಹೇಳಿದರು.
- ನೀರಾವರಿ ಇಲಾಖೆಗೆ 40 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಮೀಸಲಿಟ್ಟಿದ್ದೇನೆ ಎಂದರು.
- ಜೆಡಿಎಸ್ ಶಾಸಕ ಹೆಚ್. ವಿಶ್ವನಾಥ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ನಮ್ಮ ಸರ್ಕಾರ ರಾಕ್ಷಸ ಆಡಳಿತ ಎಂದಿದ್ದಾರೆ. ಇವರು ಸಂಸದೀಯ ಪಟು ಎಂದು ಹೇಳುವುದು ನಿಜಕ್ಕೂ ನಮಗೆ ಆಶ್ಚರ್ಯವಾಗಿದೆ ಎಂದು ಹೇಳಿದರು.