ಕರ್ನಾಟಕ

karnataka

ETV Bharat / city

ಆಟೋ ಚಾಲಕನ ಸಮಯಪ್ರಜ್ಞೆ.. ಬೆಂಗಳೂರಿನಲ್ಲಿ ಮನೆ ತೊರೆದ ಮಕ್ಕಳು ಮಂಗಳೂರಿನಲ್ಲಿ ಸಿಕ್ಕಿದ್ದು ಹೇಗೆ? - bangalore crime case

ಬೆಂಗಳೂರಿನ ಯುವತಿ ಮತ್ತು ನಾಲ್ವರು ಮಕ್ಕಳು ಕ್ರೀಡೆಯಲ್ಲಿ ಆಸಕ್ತಿಯಿದ್ದು, ಸಾಧನೆ ಮಾಡಿ ಬರುವುದಾಗಿ ಪತ್ರ ಬರೆದು ಮನೆ ತೊರೆದಿದ್ದರು. ಬೆಂಗಳೂರಿನಲ್ಲಿ ಕಾಣೆಯಾಗಿದ್ದ ಈ ಮಕ್ಕಳ ತಂಡ ಮಂಗಳೂರಿನಲ್ಲಿ ಪತ್ತೆಯಾಗಿದೆ.

children missing case
ಬೆಂಗಳೂರಿನಲ್ಲಿ ಕಾಣೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ

By

Published : Oct 12, 2021, 1:52 PM IST

Updated : Oct 12, 2021, 3:00 PM IST

ಬೆಂಗಳೂರು/ಮಂಗಳೂರು: ಓದಿನಲ್ಲಿ ಆಸಕ್ತಿಯಿಲ್ಲ, ಕ್ರೀಡೆಯಲ್ಲಿ‌ ಆಸಕ್ತಿಯಿದ್ದು ಸಾಧನೆ ಮಾಡಿ ಮನೆಗೆ ಬರುವುದಾಗಿ ಪತ್ರ ಬರೆದು ಮನೆ ತೊರೆದಿದ್ದ ಮೂವರು ಮಕ್ಕಳನ್ನು ಬಾಗಲಗುಂಟೆ ಪೊಲೀಸರು ಪತ್ತೆ ಹಚ್ಚಿದ ಬೆನ್ನಲ್ಲೇ, ಸೋಲದೇವಹಳ್ಳಿ ಠಾಣಾ ವ್ಯಾಪ್ತಿಯಲ್ಲಿಯೂ‌ ಇದೇ ಮಾದರಿಯಲ್ಲಿ ಕಾಣೆಯಾಗಿದ್ದ ಯುವತಿ ಮತ್ತು ನಾಲ್ವರು ಮಕ್ಕಳು ಮಂಗಳೂರಿನ ಪಾಂಡೇಶ್ಚರ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಾರೆ‌.

ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಪ್ರತಿಕ್ರಿಯೆ

ಮನೆ ತೊರೆದಿದ್ದ ಸೋಲದೇವಹಳ್ಳಿ ಠಾಣಾ ವ್ಯಾಪ್ತಿಯ ಎಜಿಬಿ ಲೇಔಟ್ ನಲ್ಲಿರುವ ಕ್ರಿಶ್ಚಲ್ ಅಪಾರ್ಟ್​​ಮೆಂಟ್​​ನ ನಿವಾಸಿಗಳಾದ ಬಿಸಿಎ ವ್ಯಾಸಂಗ ಮಾಡುತ್ತಿರುವ ಅಮೃತವರ್ಷಿಣಿ, 12 ವರ್ಷದ ರಾಯನ್ ಸಿದ್ದಾಂತ್, ಭೂಮಿ, ಚಿಂತನ್ ಎಂಬುವವರು ಪತ್ತೆ ಆಗಿದ್ದಾರೆ.

ಒಂದೇ ಅಪಾರ್ಟ್​​ಮೆಂಟ್​​ನಲ್ಲಿ ನಾಲ್ವರು ವಾಸವಾಗಿದ್ದರು. ಪರಸ್ಪರ ಸ್ನೇಹಿತರಾಗಿದ್ದ ಈ ಮಕ್ಕಳು ಎರಡು ದಿನಗಳ ಹಿಂದೆ‌ ಕ್ರೀಡೆಯಲ್ಲಿ ಆಸಕ್ತಿಯಿದ್ದು, ಸಾಧನೆ ಮಾಡಿ ಬರುವುದಾಗಿ ಪತ್ರ ಬರೆದು ಮನೆ ತೊರೆದಿದ್ದರು. ಹೋಗುವಾಗ ಹಣ, ಚಿನ್ನ ಹಾಗೂ‌ ಫುಡ್ ಪ್ಯಾಕೇಟ್ ಹಾಗೂ ಇನ್ನಿತರೆ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದರು. ಈ ಸಂಬಂಧ ಪೋಷಕರು ನೀಡಿದ ದೂರಿನ ಮೇರೆಗೆ ಸೋಲದೇವಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಕಾಡುಮೇಡು ಅಲೆದು ಟ್ರಕ್ಕಿಂಗ್ ಸಿದ್ಧತೆ ನಡೆಸಿದ್ದ ಮಕ್ಕಳು:

ಸ್ಯಾಂಡಲ್​ವುಡ್​ನ ಸಿನಿಮಾವೊಂದರ ಮಾದರಿಯಂತೆ ಮಂಗಳೂರಿಗೆ ಹೋಗಿ ಕಾಡುಮೇಡುಗಳಲ್ಲಿ ಟ್ರಕ್ಕಿಂಗ್ ಮಾಡಲು ಈ ಮಕ್ಕಳು ಮುಂದಾಗಿದ್ದರು ಎಂದು‌ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ‌. ಈ ವೇಳೆ ಒಬ್ಬರಿಗೆ ಗದರಿಸಿ ಪ್ರಶ್ನಿಸಿದರೆ ಜೊತೆಯಲ್ಲಿ ಇದ್ದವರು ಅಳುತ್ತಾರೆ. ಅದೇ ರೀತಿ ಒಬ್ಬರನ್ನು ಪ್ರಶ್ನಿಸಿದರೆ ನಾಲ್ವರು ಉತ್ತರಿಸುತ್ತಾರೆ, ಮಕ್ಕಳು ಅಮಾಯಕತನದ ಹೇಳಿಕೆ ನೀಡುತ್ತಿರುವುದಾಗಿ ತಿಳಿದುಬಂದಿದೆ. ಮತ್ತೊಂದೆಡೆ ಪೋಷಕರ ಬಳಿ ಕ್ರಿಕೆಟ್ ಆಡುವುದಾಗಿ ಹೇಳಿ ಫ್ಲ್ಯಾಟ್​ನಿಂದ ಲಗೇಜ್ ಶಿಫ್ಟ್​​ ಮಾಡಿಕೊಂಡು ಹೋಗಿದ್ದಾರೆ. ಹಲವು ಬಾರಿ ಫ್ಲ್ಯಾಟ್​​ನಿಂದ ಪಕ್ಕದ ರಸ್ತೆಗೆ ಲಗೇಜ್ ಶಿಫ್ಟ್ ಮಾಡಿದರೂ ಪೋಷಕರ ಅರಿವಿಗೆ ಬಂದಿರಲಿಲ್ಲ. ಆದ್ರೆ ಮಕ್ಕಳ ಓಡಾಟದ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು.

ಮಕ್ಕಳನ್ನು ಪೊಲೀಸರಿಗೆ ಒಪ್ಪಿಸಿದ ಆಟೋ ಚಾಲಕ:

ಬೆಂಗಳೂರು ಮೂಲಕ ಮಂಗಳೂರಿಗೆ ಹೋಗಿದ್ದ ಮಕ್ಕಳು ಪಾಂಡೇಶ್ವರದಲ್ಲಿ ಆಟೋ ಹತ್ತಿದ್ದಾರೆ. ಸರಿಯಾಗಿ ವಿಳಾಸ ಹೇಳಲು ತೊದಲಿಸಿದ ಮಕ್ಕಳ ಹಾವಭಾವ ಕಂಡು ಚಾಲಕ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಟೋ ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತ:

ವಿಚಾರಣೆ ನಡೆಸಿದಾಗ ಬೆಂಗಳೂರಿನಿಂದ ಬಂದಿರುವುದಾಗಿ ಮಕ್ಕಳು ಒಪ್ಪಿಕೊಂಡಿದ್ದಾರೆ. ಆಟೋ ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಡಿಸಿಪಿ ಪ್ರತಿಕ್ರಿಯೆ:

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ತನಿಖೆಯಲ್ಲಿ ಮಕ್ಕಳು ಚಿಕ್ಕಬಾಣಾವರ ರೈಲ್ವೆ ಸ್ಟೇಷನ್​​​ಗೆ ಹೋಗೋದು ಮಾತ್ರ ಗೊತ್ತಾಗಿತ್ತು.‌ ನಂತರ ತುಮಕೂರು, ಮೈಸೂರಿಗೆ ಆನ್‌ಲೈನ್​​ನಲ್ಲಿ ಟಿಕೆಟ್ ಬುಕ್ಕಿಂಗ್ ಬಗ್ಗೆ ಪರಿಶೀಲನೆ ಮಾಡಿದ್ದರು. ಇದರಂತೆ ಎರಡು ಪೊಲೀಸ್ ತಂಡಗಳನ್ನು ಮೈಸೂರು ತುಮಕೂರಿಗೆ ಕಳುಹಿಸಲಾಗಿತ್ತು. ಚಿಕ್ಕಬಾಣಾವರದಿಂದ ಯಶವಂತಪುರ - ಮೈಸೂರು - ಅರಸಿಕೆರೆ - ಬೆಳಗಾವಿಗೆ ರೈಲಿನಲ್ಲಿ ಹೋಗಿದ್ದರು. ನಿನ್ನೆ ರಾತ್ರಿ ಮತ್ತೆ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಮತ್ತೆ ಮಂಗಳೂರಿಗೆ ಟಿಕೆಟ್ ತೆಗೆದುಕೊಂಡು ಹೋಗಿದ್ದಾರೆ. ಮಂಗಳೂರಿಗೆ ಹೋಗುವಷ್ಟರಲ್ಲಿ ಹಣ ಖಾಲಿ ಆಗಿದೆ. ಈ ವೇಳೆ ಕುಟುಂಬಸ್ಥರಿಗೆ ಅಮೃತವರ್ಷಿಣಿ ಕರೆ‌ ಮಾಡಿ, ನಮಗೆ ಭಯ ಆಗಿದೆ. ದುಡ್ಡು ಇಲ್ಲ ಎಂದು ಕರೆ ಮಾಡಿದ್ದರು. ಪೋಷಕರ ಮಾಹಿತಿ ಮೇರೆಗೆ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದೆವು ಎಂದ ಡಿಸಿಪಿ ಹೇಳಿದ್ದಾರೆ.

ಇದನ್ನೂ ಓದಿ:ಪೊಲಿಟಿಕಲ್ ಕ್ಯಾಂಪೇನ್​ ನಡೆಸುತ್ತಿದ್ದ ಡಿಸೈನ್ ಬಾಕ್ಸ್​ ಕಂಪನಿ ಮೇಲೆ ಐಟಿ ದಾಳಿ

ಟ್ರಿಪ್ ಹೋಗುವಂತಹ ಪ್ಲಾನ್​​​​ ಮಾಡಿಕೊಂಡು ಹೋಗಿದ್ದಾರೆ. ಆದರೆ ಎಲ್ಲಿಗೆ ಹೋಗಬೇಕು ಎಂಬುದು ಗೊತ್ತಾಗಿಲ್ಲ. ಹಣದ ಸಮಸ್ಯೆ ಎದುರಾಗಿದ್ದರಿಂದ ಮಕ್ಕಳು ಕರೆ ಮಾಡಿದ್ದಾರೆ. ಮಂಗಳೂರಿನಿಂದ ಅವರನ್ನು‌ ಕರೆದುಕೊಂಡು ಬರಲಾಗುತ್ತಿದೆ. ಕುಟುಂಬಸ್ಥರ ಮುಂದೆಯೇ ವಿಚಾರಣೆ ಮಾಡುತ್ತೇವೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

Last Updated : Oct 12, 2021, 3:00 PM IST

ABOUT THE AUTHOR

...view details