ಬೆಂಗಳೂರು: ಲೋಕೋಪಯೋಗಿ ಇಲಾಖೆಗೆ 870 ಎಂಜಿನಿಯರ್ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ರದ್ದುಗೊಳಿಸಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನೇಮಕಾತಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ 870 ಎಂಜಿನಿಯರುಗಳ ನೇಮಕಾತಿ ಮಾಡಲು ನಿರ್ಧರಿಸಲಾಗಿತ್ತು. ಮುಖ್ಯಎಂಜಿನಿಯರ್‌ರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡು ಕೆಇಎ ಈ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಅದು ಪಾರದರ್ಶಕತೆಯಿಂದ ಕೂಡಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು ಎಂದು ವಿವರಿಸಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಈ ಹಿನ್ನೆಲೆ ಬಿಜೆಪಿ ಸರ್ಕಾರ ಕೆಇಎ ಮೂಲಕ ನಡೆಯುವ ನೇಮಕಾತಿ ಪ್ರಕ್ರಿಯೆ ರದ್ದು ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದ್ದು, ಕೆಪಿಎಸ್‌ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ಕೆಪಿಎಸ್‌ಸಿ ಸ್ವತಂತ್ರ ಸಂಸ್ಥೆಯಾಗಿದ್ದು, ಪಾರದರ್ಶಕವಾಗಿ ನೇಮಕ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಹಿಂದಿನ ಸರ್ಕಾರ ಕೆಪಿಎಸ್‌ಸಿ ಮೂಲಕ ನೇಮಕ ಪ್ರಕ್ರಿಯೆ ವಿಳಂಬವಾಗಲಿದೆ ಎಂಬ ಕಾರಣ ನೀಡಿ ಕೆಇಟಿ ಮೂಲಕ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಿ ಅಧಿಸೂಚನೆ ಹೊರಡಿಸಿತ್ತು. ಇದರಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ತಮಗೆ ಬೇಕಾದವರನ್ನು ಇಲಾಖೆಯಲ್ಲಿ ಭರ್ತಿ ಮಾಡಲಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕೆಇಎ ಮೂಲಕ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಲಾಗಿದೆ.