ಕರ್ನಾಟಕ

karnataka

ETV Bharat / city

2 ವರ್ಷದಲ್ಲಿ ಅಮೃತ ನಗರೋತ್ಥಾನ ಯೋಜನೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಸೂಚನೆ - ಅಮೃತ ನಗರೋತ್ಥಾನ ಯೋಜನೆ

ಅಮೃತ ನಗರೋತ್ಥಾನ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

c m bommai meeting with Urban Development Department
ಎರಡು ವರ್ಷದಲ್ಲಿ ಅಮೃತ ನಗರೋತ್ಥಾನ ಯೋಜನೆ ಪೂರ್ಣಗೊಳಿಸಿ

By

Published : Jun 3, 2022, 8:11 PM IST

ಬೆಂಗಳೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮೂರು ವರ್ಷಗಳ ಬದಲಾಗಿ ಎರಡು ವರ್ಷಗಳಲ್ಲಿಯೇ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ರಾಜ್ಯದ 291 ನಗರ ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಗಳನ್ನು ಅನುಮೋದಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಒಟ್ಟು 3,885 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯನ್ನು 2,024ರಲ್ಲಿಯೇ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ತಾಂತ್ರಿಕವಾಗಿ ಕಾರ್ಯಸಾಧ್ಯ ಇರುವಲ್ಲಿ ತ್ವರಿತ ಕಾಮಗಾರಿ: ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಐದು ವರ್ಷಗಳಲ್ಲಿ ರಾಜ್ಯದ ಪಾಲೂ ಸೇರಿದಂತೆ ಒಟ್ಟು 9,260 ಕೋಟಿ ರೂ. ವೆಚ್ಚದಲ್ಲಿ 287 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು ಮತ್ತು ಒಳಚರಂಡಿ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಯೋಜನೆಯಡಿ, ತಾಂತ್ರಿಕವಾಗಿ ಕಾರ್ಯಸಾಧ್ಯವಾಗಿರುವ ನಗರ ಸ್ಥಳೀಯ ಸಂಸ್ಥೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.

ಸರಳ ನಿಯಮಗಳೊಂದಿಗೆ ವಸತಿ ಯೋಜನೆ: ನಗರ ಪ್ರದೇಶದ ಬಡಜನರಿಗೆ ಉತ್ತಮ ಸೌಲಭ್ಯ ಒದಗಿಸಲು ಸೂಚಿಸಿದ ಮುಖ್ಯಮಂತ್ರಿಗಳು, ನಗರ ಪ್ರದೇಶದ ಸರಳ ನಿಯಮಗಳೊಂದಿಗೆ ವಸತಿ ಯೋಜನೆ ರೂಪಿಸಲು ಸೂಚಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ 6,000 ಪೌರ ಕಾರ್ಮಿಕರ ನೇಮಕಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ನೇಮಕಾತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವವರಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು ಹಾಗೂ ರೋಸ್ಟರ್ ವಿನಾಯಿತಿ ನೀಡಲು ಕ್ರಮ ವಹಿಸುವಂತೆ ತಿಳಿಸಿದರು.

ಪೌರ ಕಾರ್ಮಿಕರಿಗೆ 2,000 ರೂ. ಹಾರ್ಡ್‍ಷಿಪ್ ಭತ್ಯೆ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ರಾಜ್ಯದ ಎಲ್ಲ ವಿಭಾಗಗಳಲ್ಲಿ ಎಲ್ಲ ಸೌಕರ್ಯಗಳನ್ನೂ ಒಳಗೊಂಡ ಇಂಟಿಗ್ರೇಟೆಡ್ ಟೌನ್‌ಶಿಪ್(Integrated township) ಅನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಯೋಜನೆ ಅನುಷ್ಠಾನಕ್ಕೆ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.

ಎಲ್ಲ ವಿಭಾಗಗಳಿಂದ ಸ್ವೀಕರಿಸಲಾದ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಯೋಜನೆಗೆ ಕೂಡಲೇ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಬೇಕು. ಈ ಯೋಜನೆಗೆ ಸಂಬಂಧ ಪಟ್ಟ ಎಲ್ಲ ಇಲಾಖೆಗಳ ಅಭಿಪ್ರಾಯ ಪಡೆದು ಟೌನ್‍ಶಿಪ್​​​​​ ರೂಪುರೇಷೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ, ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಅಜಯ್ ನಾಗಭೂಷಣ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆಯುಕ್ತ ಕೆ.ಪಿ. ಮೋಹನ್ ರಾಜ್, ಪೌರಾಡಳಿತ ಇಲಾಖೆ ನಿರ್ದೇಶಕರಾದ ಎಂ.ಎಸ್. ಅರ್ಚನಾ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಬಿಹಾರ ಡಿಸಿಎಂ ರೇಣು ದೇವಿ

ABOUT THE AUTHOR

...view details