ಬೆಂಗಳೂರು: ಸಾರಿಗೆ ನಿಗಮಗಳು ಪ್ರಾರಂಭಿಸಿರುವ ನೂತನ ಕಾರ್ಗೋ ಸೇವೆಗೆ ಇಂದು ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.
ವಿಧಾನಸೌಧದ ಮುಂಭಾಗ ಕಾರ್ಗೋ ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ, ಮೊದಲ ಹಂತದಲ್ಲಿ ರಾಜ್ಯದ 88 ಬಸ್ ನಿಲ್ದಾಣಗಳಲ್ಲಿ ಹಾಗೂ ಅಂತಾರಾಜ್ಯದ 21 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಈ ಯೋಜನೆಯಿಂದ ನಿಗಮಕ್ಕೆ ವಾರ್ಷಿಕ 70 ರಿಂದ 80 ಕೋಟಿ ಆದಾಯದ ನಿರೀಕ್ಷೆ ಇದೆ. ಕೆಎಸ್‌ಆರ್‌ಟಿಸಿ 31 ಲಕ್ಷ ಪ್ರಯಾಣಿಕರಿಗೆ ನಿತ್ಯ ಸೇವೆ ಸಲ್ಲಿಸುತ್ತಿದೆ. ಸಾರಿಗೆ ಸಂಸ್ಥೆ ಆದಾಯವನ್ನು ಹೆಚ್ಚಿಸುವ ಕೆಲಸ ಆಗಬೇಕಿದ್ದು, ಇಂದು ಕಾರ್ಗೋ ಸೇವೆ ಲೋಕಾರ್ಪಣೆ ಮಾಡಿದ್ದೇವೆ. ನಮ್ಮ ಬಸ್ ಸಂಚರಿಸುವ ವಿವಿಧೆಡೆ ಕಾರ್ಗೋ ಸೇವೆ ಲಭ್ಯವಿದೆ. ಕೋವಿಡ್ನಿಂದ ಸಾರಿಗೆ ಸಂಸ್ಥೆ ನಷ್ಟದಲ್ಲಿತ್ತು. ಅದಕ್ಕಾಗಿ ಪರ್ಯಾಯ ಮಾರ್ಗ ಹುಡುಕಿಕೊಳ್ಳಲಾಗಿದೆ ಎಂದರು.