ಬೆಂಗಳೂರು:ಭಾರತೀಯ ಜನತಾ ಪಕ್ಷದಲ್ಲೊಂದು ನಿಯಮವಿದೆ. 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಇಲ್ಲ ಅನ್ನೋದೇ ಆ ಕಟ್ಟುನಿಟ್ಟಿನ ನಿಯಮ. ಇದರ ಜೊತೆಗೆ ಭ್ರಷ್ಟಾಚಾರರಹಿತವಾಗಿ ಕ್ಲೀನ್ ಇಮೇಜ್ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ ಅನ್ನುತ್ತೆ ಕೇಸರಿ ಪಕ್ಷ. ಆದ್ರೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಅನ್ನಿಸುತ್ತೆ. ಪ್ರವಾಹ, ಕೋವಿಡ್ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದ್ರೂ ಸಚಿವರು, ಸಿಎಂ ಪುತ್ರನ ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರದ ಗಂಭೀರ ಆರೋಪಗಳು ಮೇಲಿಂದ ಮೇಲೆ ಕೇಳಿಬಂದಿದ್ದವು.
ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಅಧಿಕಾರವನ್ನು ಮುಂದುವರಿಸಿ ಇತರೆ ರಾಜ್ಯಗಳಿಗೆ ಮಾದರಿಯನ್ನಾಗಿ ಮಾಡುವ ಗುರಿ ಹೊಂದಲಾಗಿತ್ತು. ಆದ್ರೆ 2019ರಲ್ಲಿ ಉಂಟಾಗಿದ್ದ ಮಹಾ ಪ್ರವಾಹ ಹಾಗೂ ಮಾರಕ ಕೋವಿಡ್ ಪರಿಹಾರದಲ್ಲಿ ಸಚಿವರುಗಳ ವಿರುದ್ಧವೇ ಭ್ರಷ್ಟಾಚಾರದ ಗುರುತರ ಆರೋಪವಿತ್ತು.
ಕಾಂಗ್ರೆಸ್-ಜೆಡಿಎಸ್‌ನಿಂದ ಹೊರಬಂದಿದ್ದ 17 ಶಾಸಕರ ನೆರವಿನಿಂದ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಹೆಜ್ಜೆ ಹೆಜ್ಜೆಗೂ ಸವಾಲುಗಳ ಸರಮಾಲೆಯನ್ನೇ ಎದುರಿಸಿದ್ದಾರೆ. ಕೆಲವು ಸಚಿವರು ಹಾಗೂ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರು ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಸೂಪರ್ ಸಿಎಂ ಎಂಬ ಆರೋಪಗಳನ್ನು ಮಾಡಿದ್ರು. ಕೆಲವು ಸಚಿವರು ತಮ್ಮ ಇಲಾಖೆಗಳಲ್ಲಿ ಸಿಎಂ ಪುತ್ರ ವಿಜಯೇಂದ್ರ ಮೂಗು ತೂರಿಸುತ್ತಾರೆ ಎಂಬ ಗಂಭೀರ ಆರೋಪ ಮಾಡಿದ್ರು. ಅಷ್ಟೇ ಅಲ್ಲ, ಶಿಕ್ಷಕರ ವರ್ಗಾವಣೆ ವಿಚಾರದಲ್ಲೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಸರು ಕೇಳಿ ಬಂದಿತ್ತು.