ಬೆಂಗಳೂರು:ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ವಾಟ್ಸ್ಆ್ಯಪ್ ಮುಖಾಂತರ ಗ್ರೂಪ್ ರಚಿಸಿ ಜಿಹಾದ್ (ಧರ್ಮ) ಯುದ್ದಕ್ಕೆ ಪ್ರಚೋದನೆ ನೀಡುತ್ತಿದ್ದ ಗಂಭೀರ ಆರೋಪದಡಿ ಬಂಧಿತನಾಗಿರುವ ಅಖ್ತರ್ ಹುಸೇನ್ ಬಗ್ಗೆ ಮತ್ತಷ್ಟು ಮಾಹಿತಿ ದೊರೆತಿದೆ. ಚಿಕ್ಕ ವಯಸ್ಸಿನಿಂದಲೇ ಭಯೋತ್ಪಾದಕ ಸಂಘಟನೆಗಳ ಪ್ರಮುಖ ನಾಯಕರ ಭಾಷಣದ ವಿಡಿಯೋ ನೋಡುತ್ತಾ ಈತ ಪ್ರೇರಣೆಗೊಂಡಿದ್ದ. ಅಲ್ಲದೇ ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸದಾ ಕಿಡಿ ಕಾರುತ್ತಿದ್ದನಂತೆ.
ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ: ತನ್ನ ಸಮುದಾಯದವರು ಶೋಷಣೆಗೆ ಒಳಗಾಗಿದ್ದಾರೆಂದು ಹೇಳುತ್ತಾ ಧರ್ಮ ಯುದ್ಧದಲ್ಲಿ ಭಾಗಿಯಾಗುವಂತೆ ಯುವಕರನ್ನು ಹುರಿದುಂಬಿಸುತಿದ್ದ. ಉಗ್ರ ಸಂಘಟನೆಗಳ ಮೇಲೆ ಅಪಾರ ಒಲವು ಹೊಂದಿದ್ದ ಅಖ್ತರ್ ಇದೇ ವರ್ಷದಲ್ಲಿ ಅಫ್ಘಾನಿಸ್ತಾನಕ್ಕೆ ಹೋಗಲು ಸಿದ್ದತೆ ನಡೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಧರ್ಮದ ಉಳಿವಿಗಾಗಿ 'ಜಿಹಾದ್' ಯುದ್ಧ ಮಾಡಬೇಕು. ಈ ಮೂಲಕ ಶೋಷಣೆಯಾಗುವುದನ್ನು ತಪ್ಪಿಸಬೇಕೆಂದು ಸಾಮಾಜಿಕ ಜಾಲತಾಣಗಳ ಗುಂಪಿನ ಸದಸ್ಯರಿಗೆ ಆರೋಪಿ ಕರೆ ನೀಡಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಈತ ಈವರೆಗೆ ಯಾವುದೇ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ ಸಂಘಟನೆಗೆ ಸೇರುವತ್ತ ಭಾರಿ ಉತ್ಸುಕತೆ ತೋರಿದ್ದಾನೆ. ಇದರಂತೆ ಕೋಲ್ಕತ್ತಾದ ಓರ್ವ, ಬಾಂಗ್ಲಾದೇಶದ ಇಬ್ಬರು ಹಾಗೂ ತಾನು ಸೇರಿ ಒಟ್ಟು ನಾಲ್ವರು ಅಫ್ಫಾನಿಸ್ತಾನಕ್ಕೆ ತೆರಳಲು ಯೋಜನೆ ರೂಪಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.