ಬೆಂಗಳೂರು: ಬಿಬಿಎಂಪಿ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಬಾವಿ ನಿವಾಸಿ ವಿಜಯಕಲಾ (37) ಮೃತರು. ಬೈಕ್ ಸವಾರ ಯೋಗೇಂದ್ರ (41) ಗಾಯಗೊಂಡಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಯೋಗೇಂದ್ರ ಅವರು ವಿಜಯಕಲಾ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ನಾಗರಬಾವಿ ಸರ್ಕಲ್ ಬಳಿ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಬಿಬಿಎಂಪಿ ಟಿಪ್ಪರ್ ಚಾಲಕ ಮಾನಸ ನಗರದ ಬಸ್ ನಿಲ್ದಾಣದ ಕಡೆಯಿಂದ ಚಂದ್ರಾ ಲೇಔಟ್ ಕಡೆಗೆ ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದರಂತೆ. ನಾಗರಬಾವಿ ಸರ್ಕಲ್ ಬಳಿ ಬಂದಾಗ ನಿಯಂತ್ರಣ ತಪ್ಪಿ, ಮುಂದೆ ಹೋಗುತ್ತಿದ್ದ ಯೋಗೇಂದ್ರ ಅವರ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ.