ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಲ್ಲಿನ ನಿರ್ವಹಣಾ ಸಮಿತಿಗಳಿಗೆ ಕೋವಿಡ್ ಸಂಬಂಧಿಸಿದಂತೆ ಬಿಬಿಎಂಪಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕೊವಿಡ್-19 ಅನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಅಡಿಯಲ್ಲಿ ಸಾಂಕ್ರಾಮಿಕ ರೋಗವೆಂದು ಸೂಚಿಸಲಾಗಿದೆ. ಈ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆಕ್ಷನ್ 4ರ ಅಡಿಯಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆಗೆ ಅಧಿಕಾರ ನೀಡಲಾಗಿದೆ.
ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
ಈ ಸಂಬಂಧ ಅಪಾರ್ಟ್ಮೆಂಟ್ಗಳಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಹಲವು ಸೂಚನೆಗಳನ್ನು ನೀಡಲಾಗಿದೆ. ಈಗಿರುವ ಸರ್ಕಾರಿ ಆದೇಶಗಳು ಮತ್ತು ಮಾರ್ಗಸೂಚಿಗಳ ಜತೆಗೆ, ಪಾಲಿಕೆ ಹೊರಡಿಸಿರುವ ಮಾರ್ಗಸೂಚಿಯಲ್ಲಿನ ಸೂಚನೆಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಅಪಾರ್ಟ್ಮೆಂಟ್ ಅಥವಾ ಕಾಂಪ್ಲೆಕ್ಸ್ಗಳ ಎಲ್ಲರೂ, ಅಲ್ಲಿಗೆ ಭೇಟಿ ನೀಡುವವರ ದೇಹದ ಉಷ್ಣಾಂಶ ತಪಾಸಣೆ ಮಾಡಬೇಕು. ಸ್ಯಾನಿಟೈಸೇಶನ್, ಮಾಸ್ಕ್ ಕಡ್ಡಾಯವಾಗಬೇಕು. ಬೇರೆಯವರು ಅಪಾರ್ಟ್ಮೆಂಟ್ಗಳಿಗೆ ಭೇಟಿ ಕೊಟ್ಟರೆ ಹೆಸರು ಮತ್ತು ಮೊಬೈಲ್ ಸಂಖ್ಯೆ ದಾಖಲಿಸಿರಬೇಕು. ಹೊರ ರಾಜ್ಯಗಳಿಗೆ ಭೇಟಿ ನೀಡಿದವರು ಆರ್ಟಿಪಿಸಿಆರ್ 72 ಗಂಟೆಗಳ ಒಳಗಿನ ನೆಗೆಟಿವ್ ಫಲಿತಾಂಶದ ವರದಿ ತಂದಿರಬೇಕು. ಇಲ್ಲವಾದಲ್ಲಿ ಬಂದ ಮೇಲೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಬೇಕು ಹಾಗೂ ಫಲಿತಾಂಶ ಬರುವವರೆಗೆ ಹೋಂ ಕ್ವಾರಂಟೈನ್ ಆಗಬೇಕು ಎಂದು ಹೇಳಿದೆ.
ಈಜುಕೊಳಗಳು ಮುಚ್ಚಿಯೇ ಇರುತ್ತವೆ. ಆದರೆ, ಜಿಮ್ಗಳು ಶೇ.60ರಷ್ಟು ಜನರೊಂದಿಗೆ ಕಾರ್ಯ ನಿರ್ವಹಿಸಬಹುದು. 3 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳು ಮಾಸ್ಕ್ ಧರಿಸಿರುವಂತೆ ಪೋಷಕರು ನೋಡಿಕೊಳ್ಳಬೇಕು. ಜನ ಸೇರುವ, ಗುಂಪಾಗಿ ನಡೆಸುವ, ಸಾರ್ವಜನಿಕ ಅಥವಾ ಸಾಮೂಹಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಹೋಂ ಡೆಲಿವರಿ, ಕೊರಿಯರ್ ಇನ್ನಿತರೆ ಸೇವೆಗಳಿಗೆ, ಸೇವೆ ನೀಡುವವರು ಅಪಾರ್ಟ್ಮೆಂಟ್ನ ಹೊರಗಿನ ಗೇಟ್ ಅಥವಾ ಮುಖ್ಯ ಗೇಟ್ ವರೆಗೆ ಮಾತ್ರ ಬರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ:MGNREGA ಜಲಶಕ್ತಿ ಅಭಿಯಾನ.. ಕರ್ನಾಟಕಕ್ಕೆ ಮೊದಲ ಸ್ಥಾನ
ಕಂಟೈನ್ಮೆಂಟ್ ಝೋನ್ಗಳಿಂದ ಕಸ ಇತ್ಯಾದಿ ನಿರ್ವಹಣೆಗೆ ವೃತ್ತಿಪರ ಕೆಲಸಗಾರರನ್ನು ಬಳಸುವುದು ಮತ್ತು ಅವರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೆಲಸ ಮಾಡುವುದು. ಕೋವಿಡ್ ಪ್ರಕರಣ ಪತ್ತೆಯಾದಲ್ಲಿ ಅಪಾರ್ಟ್ಮೆಂಟ್ನ ಎಲ್ಲರೂ ಸಹಕರಿಸುವುದು. ಮನೆಯಲ್ಲಿ ಹೋಂ ಐಸೋಲೇಷನ್ಗೆ ಅವಕಾಶ ಇಲ್ಲದಿದ್ದಲ್ಲಿ, ಕೊವಿಡ್ ಕೇರ್ ಸೆಂಟರ್ಗೆ ಅಥವಾ ಆಸ್ಪತ್ರೆಗೆ ದಾಖಲಾಗಬೇಕು ಎಂದು ಸಲಹೆ ನೀಡಲಾಗಿದೆ.