ಬೆಂಗಳೂರು: ನಗರದ ರಸ್ತೆಗುಂಡಿಗಳನ್ನು ಮುಚ್ಚಲು ನೀಡಲಾಗಿದ್ದ ಗಡುವು ಮುಗಿದಿದೆ. ಈ ಹಿನ್ನೆಲೆ ಇಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತೊಂದು ಡೆಡ್‌ಲೈನ್ ನೀಡಿದ್ದಾರೆ.
ರಸ್ತೆಗುಂಡಿಗಳನ್ನು ಮುಚ್ಚಲು ಈ ಹಿಂದೆ ಕಂದಾಯ ಸಚಿವರು, ಬಿಬಿಎಂಪಿ ಅಧಿಕಾರಿಗಳಿಗೆ ಡೆಡ್‌ಲೈನ್ ನೀಡಿದ್ದರು. 1344 ಕಿಲೋ ಮೀಟರ್ ಮುಖ್ಯ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ, ವೈಟ್ ಟ್ಯಾಪಿಂಗ್, ಮೆಟ್ರೋ ವರ್ಕ್ ನಡೀತಿದೆ. 1334 ರಸ್ತೆ ಗುಂಡಿಗಳನ್ನ ಈಗಾಗಲೇ ಮುಚ್ಚಲಾಗಿದೆ ಎಂದು ತಿಳಿಸಿದರು. 194 ಮುಖ್ಯ ರಸ್ತೆಗಳಲ್ಲಿರೋ ಗುಂಡಿಗಳನ್ನ ಮೂರು ದಿನಗಳಲ್ಲಿ ಮುಚ್ಚಲಾಗುವುದು ಎಂದ್ರು.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಟಿ ಕೆಲವು ರಸ್ತೆಗಳ ಗುಣಮಟ್ಟ ಹದಗೆಟ್ಟಿದೆ. ಜಯಮಹಲ್, ಮರಿಗೌಡ ರಸ್ತೆ, ರಿಚ್ಮಂಡ್ ರಸ್ತೆ, ಗೊರಗುಂಟೆ ಪಾಳ್ಯ ಟು ರಾಜ್ ಕುಮಾರ್ ಸಮಾಧಿ, ಯಶವಂತಪುರದಿಂದ ಗೊರಗುಂಟೆ ಪಾಳ್ಯದ ರಸ್ತೆಗಳ ಡಾಂಬರೀಕರಣ ಆಗಲಿದೆ ಎಂದರು.
ರಸ್ತೆಗುಂಡಿಗೆ ಬಿದ್ದು ಸಾವಾಗಿರುವ ವಿಚಾರ ಕುರಿತು ಮಾತನಾಡಿದ ಆಯುಕ್ತರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಪರಿಹಾರ ಕೊಡುವ ಬಗ್ಗೆ ವಿಚಾರಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣ ಕುರಿತು ಪ್ರತಿಕ್ರಿಯೆ:
ಕೋವಿಡ್ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿ, ಕೋವಿಡ್ ಸದ್ಯ ನಗರದಲ್ಲಿ ನಿಯಂತ್ರಣಕ್ಕೆ ಬರ್ತಿದೆ. ನಗರದಲ್ಲಿ ಪ್ರತಿ ದಿನ 300 ರಿಂದ 400 ಕೇಸ್ಗಳು ದಾಖಲಾಗ್ತಿವೆ. ಪ್ರತಿದಿನ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆ 50 ಮೀರುತ್ತಿಲ್ಲ. 368 ಜನರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ರು.
ನಗರದಲ್ಲಿ ಶೇಕಡಾ 83ರಷ್ಟು ಜನರಿಗೆ ಮೊದಲನೇ ಡೋಸ್, 42% ಮಂದಿಗೆ ಎರಡನೇ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಸದ್ಯ ಬಹುತೇಕ ವಲಯಗಳಲ್ಲಿ ವಿನಾಯಿತಿ ನೀಡಲಾಗಿದೆ. ಇನ್ನಷ್ಟು ವಲಯಗಳಲ್ಲಿ ವಿನಾಯಿತಿ ನೀಡುವಂತೆ ಮನವಿ ಬರುತ್ತಿದೆ. ಬರುವ ದಿನಗಳಲ್ಲಿ ತಜ್ಞರ ಜತೆ ಸಮಾಲೋಚನೆ ಮಾಡಲಾಗುವುದು ಎಂದರು.
ನಗರದಲ್ಲಿ ಸಿನಿಮಾ ಥಿಯೇಟರ್, ಪಬ್, ಸ್ವಿಮ್ಮಿಂಗ್ ಪೂಲ್ಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಸಂಬಂಧಿಸಿದಂತೆ ನಿಯಮ ಸಡಿಲಿಕೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ರಾಜ್ಯ ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಈ ಕುರಿತಂತೆ ಬಿಬಿಎಂಪಿ ಯಾವುದೇ ನಿರ್ಧಾರ ಮಾಡಿಲ್ಲ. ಮುಂದುವರಿದ ದೇಶಗಳಲ್ಲಿಯೇ ಸೋಂಕು ಉಲ್ಬಣವಾಗ್ತಿದೆ. ಯಾವುದೇ ತೀರ್ಮಾನ ಕೈಗೊಂಡ್ರೂ ಯೋಚನೆ ಮಾಡಿ ಹೆಜ್ಜೆ ಇಡಬೇಕು. ಕೋವಿಡ್ನಿಂದ ಮೃತಪಟ್ಟವರ ಡೆತ್ ಆಡಿಟ್ ನಡೆಯುತ್ತಿದೆ. ನಗರದಲ್ಲಿ ಇನ್ನೂ ಕೋವಿಡ್ ಆತಂಕ ದೂರವಾಗಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದರು. ನಗರದಲ್ಲಿ ಸದ್ಯ ಕಂಡು ಬರ್ತಿರೋದು ಶೇಕಡಾ 80 ಡೆಲ್ಟಾ ವೇರಿಯಂಟ್ ಎಂದು ಇದೇ ವೇಳೆ ಅಯುಕ್ತರು ವಿವರಿಸಿದರು.