ಬೆಂಗಳೂರು:ಸಹೋದರ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿರುವ ವ್ಯಕ್ತಿಯ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ಚಿಂತನೆ ನಡೆಸಿರುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಬಹಿರಂಗದ ನಂತರ ಸಾಕಷ್ಟು ನಾಟಕೀಯ ವಿದ್ಯಮಾನಗಳು ನಡೆದಿವೆ. ವಿಡಿಯೋ ಮೊದಲು ಯೂಟ್ಯೂಬ್ಗೆ ಅಪ್ ಲೋಡ್ ಆಗಿದ್ದು ರಷ್ಯಾದಲ್ಲಿ, ನಂತರ ದುಬೈ ಹಾಗು ಸಿಂಗಾಪುರ್ನಿಂದ ಅಪ್ ಲೋಡ್ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ:ಕೇರಳ, ಮಹಾರಾಷ್ಟದಿಂದ ಬರುವ ಚಾಲಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯ.!
ಒಂದೇ ದಿನ ಇದೆಲ್ಲಾ ಆಗಲು ಹೇಗೆ ಸಾಧ್ಯ? ಯುವತಿ ಯಾರು ಎಂದೇ ಗೊತ್ತಿಲ್ಲ. ಅಲ್ಲದೆ ಸಂತ್ರಸ್ತೆ ಬದಲು ಮೂರನೇ ವ್ಯಕ್ತಿ ದೂರು ನೀಡಿದ್ದಾರೆ ಇದನ್ನೆಲ್ಲಾ ನೋಡಿದರೆ ನಮ್ಮ ಸಹೋದರನನ್ನು ಸಿಲುಕಿಸುವ ಷಡ್ಯಂತ್ರ ನಡೆಸಲಾಗಿದೆ ಎಂದು ತಿಳಿದುಬರುತ್ತದೆ ಎಂದು ಬಾಲಚಂದ್ರ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ದೂರು ನೀಡಿರುವ ವ್ಯಕ್ತಿಯ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ನಿರ್ಧರಿಸಲಾಗುತ್ತದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ, ಸಮಗ್ರ ತನಿಖೆಯಾಗಲಿ ಎಂದು ಬಾಲಚಂದ್ರ ಜಾರಕಿಹೊಳಿ ಆಗ್ರಹಿಸಿದರು.