ಬೆಂಗಳೂರು:ಭಾರತೀಯ ಜನತಾ ಪಕ್ಷದಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲ. ಅಲ್ಲಿ ಕ್ರಿಕೆಟ್ ಬುಕ್ಕಿಗಳಿಗೆ ಟಿಕೆಟ್ ಕೊಡುವ ಕಾರ್ಯ ಆಗುತ್ತಿದೆ. ಅರ್ಹರಿಗೆ ಅವಕಾಶ ಇಲ್ಲದಂತಾಗಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಚವ್ಹಾಣ್ ಆರೋಪಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ದುಡ್ಡಿನ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ. ದುಡ್ಡು ಕೊಡುವವರಿಗೆ ಆದ್ಯತೆ ನೀಡುವ ಕಾರ್ಯ ಆಗುತ್ತಿದೆ. ಕಲಬುರಗಿ ಭಾಗದಲ್ಲಿ ಅರ್ಹತೆಗೆ ಬೆಲೆ ಕೊಡುತ್ತಿಲ್ಲ ಎಂದರು.
ಬಿಜೆಪಿಯಲ್ಲಿ ಅರ್ಹರಗಿಂತ ಕ್ರಿಕೆಟ್ ಬುಕ್ಕಿಗಳಿಗೆ ಟಿಕೆಟ್ ಕೊಡುತ್ತಾರೆ: ಬಾಬುರಾವ್ ಚೌಹಾಣ್ ಬಸವರಾಜ್ ಮತ್ತಿಮೂಡ ಅವರಂತಹ ಕ್ರಿಕೆಟ್ ಬುಕ್ಕಿಗೆ ಹಿಂದೆ ಟಿಕೆಟ್ ಕೊಡಲಾಗಿತ್ತು. ಒಬ್ಬರನ್ನ ಮುಳುಗಿಸಲು ಇನ್ನೊಬ್ಬರನ್ನು ತರುವ ಪ್ರವೃತ್ತಿ ಬಿಜೆಪಿಯಲ್ಲಿದೆ. ಲಂಬಾಣಿ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎಂಬ ಆಸೆ ಇದ್ದಿದ್ದರೆ ನನಗೆ ಕೊಡಬಹುದಿತ್ತು. ಇಲ್ಲವೇ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರಿಗೆ ಕೊಡಬಹುದಿತ್ತು. ಕಾಂಗ್ರೆಸ್ ನಿಂದ ಡಾ. ಉಮೇಶ್ ಜಾಧವ್ ಅವರನ್ನು ಕರೆತರುವ ಅಗತ್ಯ ಏನಿತ್ತು? ರೇವು ನಾಯಕ್ ಅವರನ್ನು ಮೂಲೆಗುಂಪು ಮಾಡಿದ್ದಾಯ್ತು. ಇದೀಗ ನನ್ನನ್ನು ಮೂಲೆಗುಂಪು ಮಾಡಲು ಉಮೇಶ್ ಅವರನ್ನು ಕರೆತರಲಾಗಿದೆ ಎಂದು ಚವ್ಹಾಣ್ ದೂರಿದರು.
ಅಂಬೇಡ್ಕರ್ಗೆ ಅಪಮಾನ
ಬಿಜೆಪಿಯಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಇದರ ಜೊತೆಗೆ ಇಲ್ಲಿ ಸಂವಿಧಾನ ಗೌರವಿಸುವಂತಹ ಕಾರ್ಯವು ಆಗುತ್ತಿಲ್ಲ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ದೇಶದಲ್ಲಿ ಉತ್ತಮವಾದ ಹಿನ್ನೆಲೆ ಇದೆ. ಆದ್ರೆ ಕೇಂದ್ರ ಸರ್ಕಾರ ಸಂವಿಧಾನವನ್ನೇ ಬದಲಿಸಲು ಮುಂದಾಗಿದೆ. ಈ ವಿಚಾರ ಕೂಡ ನನಗೆ ಬೇಸರ ಮೂಡಿಸಿದೆ. ಈ ಎಲ್ಲಾ ಕಾರಣಗಳಿಂದ ಬೇಸತ್ತು ನಾನು ಬಿಜೆಪಿಯನ್ನು ತೊರೆಯುತ್ತಿದ್ದೇನೆ ಎಂದು ಬಾಬುರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.