ಬೆಂಗಳೂರು:ನಟ ಪುನೀತ್ ರಾಜ್‌ಕುಮಾರ್ ನಿಧನರಾದ ಸಂದರ್ಭದಲ್ಲಿ ಸಂಪೂರ್ಣವಾಗಿ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತು, ಸುಸೂತ್ರವಾಗಿ ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡಿರುವುದಕ್ಕಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪುನೀತ್ ಪತ್ನಿ ಅಶ್ವಿನಿ ಕೃತಜ್ಞತೆ ಸಲ್ಲಿಸಿದ್ದಾರೆ.
ಗೃಹ ಸಚಿವರಿಗೆ ಪತ್ರ ಬರೆದಿರುವ ಅಶ್ವಿನಿ, 'ಪುನೀತ್ ರಾಜ್‌ಕುಮಾರ್ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೇ ಆಘಾತಕಾರಿ ವಿಷಯ. ಪುನೀತ್ ಅವರು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದವರು. ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯತೆಯಾಗಿತ್ತು. ಇಂತಹ ಸಂದರ್ಭದಲ್ಲಿ ಗೃಹಮಂತ್ರಿಗಳಾದ ತಾವು ನಮಗೆ ಬೆಂಬಲವಾಗಿ ನಿಂತಿದ್ದೀರಿ' ಎಂದು ಹೇಳಿದ್ದಾರೆ.