ಬೆಂಗಳೂರು: 10 ಸಾವಿರಕ್ಕಾಗಿ ಹೆಂಡತಿ ಮೇಲೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದ ಗಂಡನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಚೀರಂಜೀತ್ ಬಿಸ್ವಾಸ್ ಬಂಧಿತ ಆರೋಪಿ.ಕಳೆದ ಎಂಟು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಪತ್ನಿ ತಪಸಿ ಬಿಸ್ವಾತ್ ಮೇಲೆ ಈ ಪಾಪಿ ಗಂಡ ಬೆನ್ನಿನ ಭಾಗ, ಎದೆ ಹಾಗೂ ಮುಖದ ಮೇಲೆ ಆ್ಯಸಿಡ್ ಎರಚಿ ಸಾಯಿ ಎಂದು ಹೇಳಿ ಪರಾರಿಯಾಗಿದ್ದ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಪಸಿ ಹಾಗೂ ಚೀರಂಜೀತ್ ಬಿಸ್ವಾಸ್, ಮೂಲತಃ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯವರಾಗಿದ್ದು, ಕಳೆದ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮುದ್ದಾದ ಎರಡು ಹೆಣ್ಣುಮಕ್ಕಳಿವೆ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿದ್ದ ದಂಪತಿ ನಗರದ ನಾಗರಬಾವಿ ಬಳಿಯ ಏರಿಯಾವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕುಡಿತದ ಚಟ ಅಂಟಿಸಿಕೊಂಡಿದ್ದ ಚೀರಂಜೀತ್ ಬಿಸ್ವಾಸ್, ಕಳೆದ ಒಂದು ವರ್ಷದಿಂದ ಮದ್ಯಪಾನಕ್ಕೆ ದಾಸನಾಗಿ ಬೇರೆಲ್ಲೂ ಕೆಲಸಕ್ಕೆ ಹೋಗಿರಲಿಲ್ಲ. ಇದೇ ವೇಳೆ ಪರಿಚಿತ ವ್ಯಕ್ತಿಯೊಬ್ಬರು ತಪಸಿ ಬಿಸ್ವಾತ್ಳನ್ನು ನಾಗರಭಾವಿಯ ವರದಾ ಫರ್ಟಿಲಿಟಿ ಪ್ರೈವೈಡ್ ಕಂಪನಿಗೆ ಕರೆದುಕೊಂಡು ಹೋಗಿ ಬಾಡಿಗೆ ತಾಯ್ತನದಿಂದ ಹಣ ಸಂಪಾದಿಸಬಹುದು ಎಂದು ಹೇಳಿದ್ದರು. ಅಲ್ಲಿನ ವೈದ್ಯರ ಪರಿಶೀಲನೆ ಬಳಿಕ ವೈದ್ಯರು ತಪಸಿಯ ಗರ್ಭಕೋಶದಲ್ಲಿರುವ ಅಂಡಾಣು ಹೊರ ತೆಗೆದು 15 ದಿನಗಳ ನಂತರ ಮತ್ತೆ ಬರುವುದಾಗಿ ಹೇಳಿ ಕಳುಹಿಸಿದ್ದರು. ಇದರಂತೆ ಕೆಲ ದಿನಗಳ ಬಳಿಕ ಚೀರಂಜೀತ್, ಹೆಂಡತಿಯನ್ನು ಫರ್ಟಿಲಿಟಿ ಕೇಂದ್ರಕ್ಕೆ ಬಿಟ್ಟು ಊರಿಗೆ ಹೋಗಿದ್ದ. ಹಲವು ದಿನಗಳ ನಂತರ ಪತ್ನಿಗೆ ಪೋನ್ ಮಾಡಿ, ಹಣ ಕಳುಹಿಸಿಕೊಡುವಂತೆ ಹೇಳಿದ್ದ. ಇದಕ್ಕೆ ಪತ್ನಿಯು ನನಗೆ ಇಲ್ಲಿ ಕೆಲಸ ಇಲ್ಲ. ಹೀಗಾಗಿ ನನ್ನ ಬಳಿ ಹಣವೂ ಇಲ್ಲ ಎಂದಿದ್ದಳಂತೆ.
ಹೀಗಾಗಿ ಫೆ. 20ರಂದು ಬೆಂಗಳೂರಿಗೆ ಬಂದಿದ್ದ ಪತಿ, ಹೆಂಡತಿ ಇರುವ ಫರ್ಟಿಲಿಟಿ ಕೇಂದ್ರಕ್ಕೆ ಮಾತನಾಡಿಸುವ ಸೋಗಿನಲ್ಲಿ ಕಲ್ಯಾಣ ನಗರ ಬ್ರಿಡ್ಜ್ ಬಳಿ ಕರೆತಂದು, 10 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದ. ಹಣ ನೀಡಲು ನಿರಾಕರಿಸಿದಕ್ಕೆ ಕೋಪಗೊಂಡು ಬ್ಯಾಗಿನಲ್ಲಿ ತಂದಿದ್ದ ಬಾಟಲ್‌ನಲ್ಲಿದ್ದ ಆ್ಯಸಿಡ್ಅನ್ನು ಪತ್ನಿಯ ಬೆನ್ನು, ಎದೆ ಹಾಗೂ ಮುಖಕ್ಕೆ ಎರಚಿ, ಸಾಯಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.