ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕ ಕ್ರಮಬದ್ಧವಿಲ್ಲ ಎಂದು ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರು ಆರೋಪಿಸಿದ್ದಾರೆ. ಮಾರ್ಚ್ 16ರಿಂದ ಇಲ್ಲಿಯವರೆಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನ ಖಾಲಿ ಇದ್ದು, ಇತ್ತ ನೂತನ ಕುಲಪತಿಗಳ ನೇಮಕಾತಿ ಮಾಡಬೇಕಿದ್ದ ರಾಜ್ಯಪಾಲರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮತ್ತೊಂದೆಡೆ ನೇಮಕಾತಿ ಮಾಡಲು ಅರ್ಹರ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ವಿವಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲು ಸಿಂಡಿಕೇಟ್ ಸದಸ್ಯರು ಹಾಗು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಕೂಡಲೇ ನೂತನ ಕುಲಪತಿಯನ್ನು ನೇಮಕಾತಿ ಮಾಡದಿದ್ದಲ್ಲಿ ಬೋಧಕ ವರ್ಗ, ಆಡಳಿತಕ್ಕೆ ಹಾಗು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆಯಾಗುವುದಾಗಿ ಹೇಳಿದ್ದಾರೆ. ಈ ಹಿಂದೆ ಪ್ರೋ. ಡಾ. ವೇಣುಗೋಪಾಲ್‌ರವರನ್ನು ಕುಲಪತಿಗಳಾಗಿ ನೇಮಿಸಿದ್ದು, ಇದು ಕ್ರಮಬದ್ಧವಾಗಿಲ್ಲ ಎಂದು ಸಿಂಡಿಕೇಟ್ ಸದಸ್ಯ ಸಂಗಮೇಶ್ ಪಾಟೀಲ್‌ರವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಕುಲಪತಿಗಳ ನೇಮಕಾತಿ ಕ್ರಮಬದ್ಧವಾಗಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಕೋರ್ಟ್ ಈ ಆದೇಶಕ್ಕೆ ತಡೆ ನೀಡಬೇಕು ಎಂಬ ಬೇಡಿಕೆಯಿಟ್ಟು ಕುಲಪತಿಗಳಾಗಿದ್ದ ಪ್ರೋ. ಡಾ. ವೇಣುಗೋಪಾಲ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಅಲ್ಲಿಯೂ ಕೂಡ ಅವರಿಗೆ ಸ್ಟೇ ಸಿಗದ ಕಾರಣ ಅವರಿದ್ದ ಸ್ಥಾನ ಈಗ ಖಾಲಿ ಉಳಿದಿದೆ. ಅಂದರೆ, ಪ್ರೋ. ಡಾ. ವೇಣುಗೋಪಾಲ್‌ರವರ ನೇಮಕಾತಿ ಕ್ರಮಬದ್ಧವಾಗಿಲ್ಲ ಅಂತ ಮೇಲ್ನೋಟಕ್ಕೆ ಸಾಬೀತಾಗಿದೆ.