ಬೆಂಗಳೂರು:ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಧಾನಸಭೆಯಲ್ಲಿ ಮಂಡಿಸಲಾಯಿತು.
ವಕ್ಫ್ ಮಂಡಳಿಯ ಎಲ್ಲಾ ವಂಚನೆಗಳ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲು ಲೋಕಾಯುಕ್ತಕ್ಕೆ ವಹಿಸಬೇಕು ಎಂದು ವರದಿಯು ಶಿಫಾರಸ್ಸು ಮಾಡಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಸದನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವಿಶೇಷ ವರದಿಯನ್ನು ಮಂಡಿಸಿದರು.
ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಆರ್. ಅಬ್ದುಲ್ ರಿಯಾಜ್ ಖಾನ್ ವಿರುದ್ಧ ಸೂಕ್ತ ಕ್ರಮತೆಗೆದುಕೊಂಡು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ವಕ್ಫ್ ಮಂಡಳಿಯನ್ನು 12 ತಿಂಗಳಲ್ಲಿ ಅತ್ಯಂತ ಪಾರದರ್ಶಕ ಮತ್ತು ಸಾಭಿಮಾನಿಯಾಗಿ ಮಾಡಬೇಕು. ಮುಂದಿನ ದಿನಗಳಲ್ಲಿ ಮಂಡಳಿಯ ಎಲ್ಲ ಸಂಸ್ಥೆಗಳ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಕ್ಫ್ ಮಂಡಳಿಯ ಅಧೀನದಲ್ಲಿರುವ ಎಲ್ಲಾ ವಕ್ಫ್ ಸಂಸ್ಥೆಗಳು ಹೊಂದಿರುವ ಎಲ್ಲಾ ಆಸ್ತಿಗಳ ಭೂಮಿ ಲೆಕ್ಕ ಪರಿಶೋಧನೆಯನ್ನು ಕೈಗೆತ್ತಿಕೊಳ್ಳಬೇಕು. ಬೀದರ್‌ನಲ್ಲಿನ ಆಸ್ತಿಯನ್ನು ಸಮೀಕ್ಷೆ ಮಾಡಲು ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಉಪ ಆಯುಕ್ತರು, ಸಹಾಯಕ ಆಯುಕ್ತರು, ತಹಸೀಲ್ದಾರರು ಮತ್ತು ಸರ್ವೇಯರ್ಗಳನ್ನೊಳಗೊಂಡ ವಿಶೇಷ ಉದ್ದೇಶದ ಪಡೆ ರಚಿಸಬೇಕು. 6 ತಿಂಗಳಲ್ಲಿ ಸಮೀಕ್ಷೆಯನ್ನು ಸಂಪೂರ್ಣಗೊಳಿಸಬೇಕು ಎಂದಿದೆ.
ಚುನಾವಣೆ ವೇಳೆ ಕೆಲಸ ಮಾಡುವಂತೆ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಆಸ್ತಿಗಳನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪುನರ್ ಸ್ಥಾಪಿಸಲಾಗಿದೆ ಎಂದು ಸಹ ಒತ್ತಾಯಿಸಲಾಗಿದೆ.
ಆಸ್ತಿಗಳನ್ನು ಮರು ಸ್ಥಾಪಿಸಲು ಕಂದಾಯ ಇಲಾಖೆಯಿಂದ ಅಧಿಕಾರಿಗಳನ್ನು ನೇಮಿಸಬಹುದು. ಪೊಲೀಸ್ ಮತ್ತು ಕಾನೂನು ವಿಭಾಗದ ಪ್ರಾಮಾಣಿಕ ಹಿರಿಯ ಅಧಿಕಾರಿಯ ಸುಪರ್ದಿಯಲ್ಲಿ ವಕ್ಫ್ ಆಸ್ತಿಗಳ ಕಾರ್ಯಪಡೆಯನ್ನು ಸ್ಥಾಪಿಸಬೇಕು. ರಸ್ತೆ ಅಗಲೀಕರಣ ಕಾರ್ಯಕ್ರಮದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಲಹೆ ನೀಡಿದ ಕಾರ್ಯವಿಧಾನವನ್ನು ಅನುಷ್ಠಾನಗೊಳಿಸಿ ಉಪ ಆಯುಕ್ತರನ್ನು ಅತಿಕ್ರಮಣಗಳನ್ನು ತೆರವುಗೊಳಿಸಲು ಜವಾಬ್ದಾರಿ ಮಾಡಿ ಸರ್ಕಾರವು ಕಾರ್ಯೋನ್ಮುಖವಾಗಬೇಕು. ವಕ್ಫ್ ಆಸ್ತಿಗಳ ಕಾರ್ಯಪಡೆಗೆ ಮುಖ್ಯಸ್ಥರನ್ನಾಗಿ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
ವಕ್ಫ್ ಆಸ್ತಿಗಳ ಯಾವುದೇ ವಂಚನೆಯ ಕಾರ್ಯಗಳಲ್ಲಿ ಭಾಗಹಿಸಿ ತಪ್ಪಿತಸ್ಥರೆಂದು ಸಾಭೀತಾದರೆ ಎಲ್ಲಾ ವಕ್ಫ್ ಅಧಿಕಾರಿಗಳು, ಮಂಡಳಿಯ ಅಧ್ಯಕ್ಷರು, ಸದಸ್ಯರು, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ನಾಯಕರು ಮತ್ತು ಸಮಾಜ ಸುಧಾರಕರ ಸೋಗು ಹಾಕುವವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ಕೈಗೊಳ್ಳಬೇಕು. ವಕ್ಫ್ ಕಾನೂನು 1995 ಮತ್ತು ಕರ್ನಾಟಕ ರಾಜ್ಯ ವಕ್ಫ್ ನಿಯಮಗಳ 1997 ಎರಡಕ್ಕೂ ಸೂಕ್ತ ತಿದ್ದುಪಡಿ ತಂದು ಅತಿಕ್ರಮಣ ಮತ್ತು ದುರ್ಬಳಕೆ ಎರಡೂ ಶಿಕ್ಷರ್ಹಾ ಅಪರಾಧ ಎಂದು ಪರಿಗಣಿಸಬೇಕು.
ವಿವಿಧ ಜಿಲ್ಲೆಯಲ್ಲಿ ವಕ್ಫ್ ಆಸ್ತಿಗಳ ಮೇಲೆ ಸರ್ಕಾರಿ ಏಜೆನ್ಸಿಗಳು ಅತಿಕ್ರಮಣ ನಡೆಸಿದ ಪ್ರಕರಣವನ್ನೂ ಸಹ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯು ಗುರುತಿಸಬೇಕು ಮತ್ತು ಈ ಆಸ್ತಿಗಳಿಂದ ಅವಶ್ಯಕ ಬಾಡಿಗೆಯನ್ನು ಸಂಗ್ರಹಿಸಲು ಪ್ರಾರಂಭಿಸಬೇಕು. ಬಾಡಿಗೆಯನ್ನು ಮುಸ್ಲಿಂ ಸಮುದಾಯದ ಉನ್ನತಿಗಾಗಿ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಉಪಯೋಗಕ್ಕಾಗಿ ಸರಿಯಾದ ಮಾರ್ಗಸೂಚಿಗಳೊಡನೆ ಸಂಬಂಧಿತ ವಕ್ಫ್ ಸಂಸ್ಥೆಗೆ ನೀಡಬೇಕು ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರವು ಕ್ರಮ ಜರುಗಿಸಲು ಹಿಂಜರಿಕೆ ತೋರಿದರೆ ವಿವಿಧ ವಕ್ಫ್ ಆಸ್ತಿಗಳು ಸಹ ಅತಿಕ್ರಮಣಗಳು, ದುರ್ಬಳಕೆ, ರಾಜಿಗಳು, ಕಾನೂನು ಬಾಹಿರ ವಿಲೇವಾರಿ ಇತ್ಯಾದಿಗಳ ಮುಲಕ ಕಳೆದು ಹೋಗುತ್ತದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.