ಬೆಂಗಳೂರು :ಲಾಕ್ಡೌನ್ ವೇಳೆ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಇದೀಗ ಅನ್ಲಾಕ್ ಬಳಿಕ ಮತ್ತೆ ಅಪಘಾತದ ಪ್ರಮಾಣ ಏರಿಕೆಯಾಗುತ್ತಿದೆ. ಸಂಚಾರಿ ನಿಯಮ ಪಾಲಿಸಿ ಜೀವನ ಉಳಿಸಿಕೊಳ್ಳುವುದು ಅವಶ್ಯವಿದೆ ಎಂಬುದು ಲಾಕ್ಡೌನ್ನಿಂದ ಬಯಲಾಗಿದೆ.
ವಾಹನ ಸವಾರರೇ ಎಚ್ಚರ. ನಿಮ್ಮ ಪ್ರಾಣದ ರಕ್ಷಣೆ ನಿಮ್ಮ ಕೈಯಲ್ಲಿದೆ. ಲಾಕ್ಡೌನ್ ಹೇರಿಕೆಯಿಂದ ಸುಮಾರು 80 ಪ್ರತಿಶತ ರಸ್ತೆ ಅಪಘಾತ ಕಡಿಮೆಯಾಗಿದ್ದವು. ಅನ್ಲಾಕ್ ಆಗಿದ್ದೇ ತಡ ಮತ್ತೆ ಅಪಘಾತ ಪ್ರಮಾಣ ಹೆಚ್ಚಾಗಿದೆ. ಅತಿ ವಾಹನ ದಟ್ಟಣೆ, ರಸ್ತೆ ನಿಯಮ ಪಾಲನೆ ಮಾಡದಿರುವುದು, ಮದ್ಯ ಸೇವಿಸಿ ವಾಹನ ಚಾಲನೆ ಹಾಗೂ ಅತಿಯಾದ ವೇಗದಿಂದ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಾಗಿದ್ದವು. ಆದರೆ, ಲಾಕ್ಡೌನ್ ವೇಳೆ ವಾಹನಗಳು ರಸ್ತೆಗಿಳಿಯದ ಕಾರಣ ಅತ್ಯಂತ ಕಡಮೆ ಪ್ರಮಾಣದಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿವೆ.
ತುಮಕೂರು ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್ವರೆಗೆ 649 ಅಪಘಾತ ಸಂಭವಿಸಿವೆ. 219 ಜನ ಮೃತಪಟ್ಟಿದ್ದಾರೆ. ಹಂತಹಂತವಾಗಿ ಮೇ ತಿಂಗಳಿನಿಂದ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಅಪಘಾತ ಪ್ರಕರಣ ಏರಿಕೆ ಕಂಡಿವೆ.