ಬೆಂಗಳೂರು: ದೆಹಲಿಯಿಂದ ಹಿರಿಯ ವಕೀಲರು ಬರುತ್ತಾರೆ. ಅವರ ಜೊತೆಗೆ ನಾನು, ನಮ್ಮ ಕುಟುಂಬದವರು ಚರ್ಚೆ ಮಾಡಿ ದೂರು ಕೊಡ್ತಿವಿ. ಎರಡು ಮೂರು ದಿನ ತಡ ಆಗಬಹುದು. ಆದ್ರೆ, ದೂರು ಕೊಡದೆ ಬಿಡುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸದಾಶಿವನಗರದ ನಿವಾಸದಿಂದ ಮಂತ್ರಿ ಗ್ರೀನ್ಸ್ ನಿವಾಸಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ವಿರುದ್ಧ ಷಡ್ಯಂತ್ರ ಮಾಡಿದವರನ್ನ ಬಿಡುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಅವರು ಈಗ ಮಾತನಾಡುತ್ತಾ ಬಾಂಬೆ ಎಂದು ಹೇಳ್ತಾ ಇದ್ದರೂ. ಈ ವಿಚಾರಕ್ಕೆ ಬಾಂಬೆ ಸಂಬಂಧವಿಲ್ಲ. ಈ ಷಡ್ಯಂತ್ರ ಆಗಿರುವುದು ಬಾಂಬೆ ಅಲ್ಲ. ಬೆಂಗಳೂರು, ಉತ್ತರ ಕರ್ನಾಟಕ ಸುತ್ತಲೂ ನಡೆದಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿರುವುದು ಇಲ್ಲೇ. ಇದು ಬಾಂಬೆಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಈ ಷಡ್ಯಂತರವನ್ನ ಬಿಜೆಪಿಯವರು ಯಾಕೆ ಮಾಡುತ್ತಾರೆ? ಅವರ ಸರ್ಕಾರ ನಾನು ತಂದಿದ್ದೇನೆ. ಯಾರೇ ಇದ್ದರೂ ಈ ಪ್ರಕರಣದಲ್ಲಿ ಅವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಅವರನ್ನು ಮಟ್ಟ ಹಾಕಿಯೇ ತಿರುತ್ತೇವೆ. ನಮಗೆ ಧೈರ್ಯ ಇದೆ ನಮಗೆ ನಮ್ಮ ಕುಟುಂಬ ಇದೆ. ಕಾನೂನಿನ ಹೋರಾಟ ಮಾಡುತ್ತೇವೆ, ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯುವಾಗ ಹೀಗೆ ಕೆಲವರು ಮಾಡುತ್ತಾರೆ ಎಂದು ರಮೇಶ್ ಆರೋಪಿಸಿದರು.