ಬೆಂಗಳೂರು:ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ. ಕೃತ್ಯ ನಡೆದ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಕಚೇರಿಯಿಂದ, ಆರೋಪಿ ನಾಗೇಶ್ ಆ್ಯಸಿಡ್ ಬಿಸಾಡಿದ ಜಾಗ, ವಕೀಲರ ಭೇಟಿಯಾದ ಜಾಗ, ಬೈಕ್ ಬಿಟ್ಟು ಪರಾರಿಯಾದ ಜಾಗ ಸೇರಿದಂತೆ ಪ್ರತಿಯೊಂದು ಕಡೆಯೂ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಕೃತ್ಯದ ಬಳಿಕ ಆರೋಪಿ ಆಶ್ರಯ ಪಡೆದಿದ್ದ ತಿರುವಣ್ಣಾಮಲೈನ ರಮಣಾಶ್ರಮಕ್ಕೆ ಇಂದು ಬೆಳಗ್ಗೆ ಆತನನ್ನು ಕರೆದೊಯ್ಯಲಾಗಿದ್ದು, ಸ್ಥಳ ಮಹಜರು ಬಳಿಕ ಮತ್ತೆ ಆರೋಪಿಯನ್ನು ಪೊಲೀಸರು ಕರೆತರಲಿದ್ದಾರೆ.
ಇನ್ನು ಈಗಾಗಲೇ ಆರೋಪಿ ನಾಗೇಶನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, 'ನಾನು ದೊಡ್ಡ ಪ್ರಮಾದ ಮಾಡಿದ್ದೇನೆ, ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಹ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು' ಅಂದಿರುವ ನಾಗೇಶ್ ನಾನು ಮಾಡಿದ ತಪ್ಪಿಗೆ ಸದ್ಯ ನನಗೆ ಸಿಕ್ಕಿರೋದು ಕಡಿಮೆ, ಇನ್ನೂ ಶಿಕ್ಷೆ ಆಗಬೇಕು ಎಂದು ಕಣ್ಣೀರಿಟ್ಟಿದ್ದಾನೆ ಎನ್ನಲಾಗಿದೆ.