ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸುತ್ತೇನೆ. ಕೇಂದ್ರ ಸರ್ಕಾರದಿಂದ 13 ಲಕ್ಷದ 90 ಸಾವಿರ ಲಸಿಕೆ ನಾಳೆ ಅಥವಾ ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಬರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಗುಡ್ ನ್ಯೂಸ್ ಹೇಳಿದ್ದಾರೆ.
ಕೊರೊನಾ ಲಸಿಕೆ ಕುರಿತು ಸುಧಾಕರ್ ಪ್ರತಿಕ್ರಿಯೆ ಇಂದು ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿರುವ ಮಾದರಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ 13 ಲಕ್ಷದ 90 ಸಾವಿರ ಲಸಿಕೆ ನಾಳೆ ಅಥವಾ ನಾಡಿದ್ದು ಕರ್ನಾಟಕಕ್ಕೆ ಬರಲಿದೆ. ಯಾವ ಆರೋಗ್ಯ ಕಾರ್ಯಕರ್ತರ ಹೆಸರು ನೋಂದಣಿ ಆಗಿಲ್ಲವೊ ಕೂಡಲೇ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಈಗಾಗಲೇ ಲಸಿಕೆ ಸಂಬಂಧ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲ ಕಡೆ ಪ್ರಚಾರ ನೀಡಲಾಗುತ್ತಿದೆ. ನಾವೂ 263 ಕೇಂದ್ರಗಳಲ್ಲಿ ಡ್ರೈ ರನ್ ಮಾಡುತ್ತಿದ್ದೇವೆ. ವೈಜ್ಞಾನಿಕವಾಗಿ ಬಹಳ ಅಚ್ಚುಕಟ್ಟಾಗಿ ಆಸ್ಟರ್ ಆಸ್ಪತ್ರೆಯವರು ಡ್ರೈ ರನ್ ಮಾಡಿದ್ದಾರೆ. ನಾನು ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಕೂಡ ಪರಿಶೀಲನೆ ನಡೆಸುತ್ತೇನೆ ಅಂತ ತಿಳಿಸಿದರು.