ವಿಜಯನಗರ: ವಿಜಯನಗರ ಜಿಲ್ಲೆಯಾಗಿದ್ದೇ ತಡ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ಎಗರಿಸಲು ಮುಂದಾಗಿದ್ದಾರೆ. ಇದಕ್ಕೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸಾಥ್ ಕೊಟ್ಟಿರೋದು ದೃಢಪಟ್ಟಿದ್ದು, ಇಂಥವರ ವಿರುದ್ಧ ಈಗ ನಗರಸಭೆ ಕಮಿಷನರ್ ದೂರು ನೀಡಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಹಾಗೂ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ನಗರಸಭೆ ಮಾಜಿ ಸದಸ್ಯರು, ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ನಗರದ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 17 ಜನರ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಹೊಸಪೇಟೆ ನಗರದ ಸರ್ವೇ ನಂ3 02/ಬಿ2ರಲ್ಲಿ 1.82 ಸೆಂಟ್ಸ್ ಭೂಮಿಯ ನಕಲಿ ದಾಖಲೆ ಸೃಷ್ಟಿಸಿದ ಆರೋಪಿ ಮಲ್ಲಿಕಾರ್ಜುನ, ಡಿ.ವೇಣುಗೋಪಾಲ, ಜೇಟ್‌ರಾಮ್ ವಿರುದ್ಧ ದೂರು ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸಂಕ್ಲಾಪುರ ಗ್ರಾಮದ ಸರ್ವೇ ನಂ.148ರ 2.17 ಎಕರೆ ಭೂಮಿಯ ನಕಲಿ ಖಾತೆ ಸೃಷ್ಟಿಸಿದ ಆರೋಪದಡಿ ಟಿ.ಸೋಮಪ್ಪ, ಕೆ.ಗಂಗಾಧರ, ಬೆಳಗೋಡ್ ಅಂಬಣ್ಣ, ಗಣೇಶ್, ತಾಯಪ್ಪ, ಡಿ.ಪಾರ್ವತಮ್ಮ ಹಾಗೂ ಗೋವಿಂದಮ್ಮ ವಿರುದ್ಧ ದೂರು ದಾಖಲಾಗಿದೆ. ಹೊಸಪೇಟೆ ತಾಲೂಕು ಕಚೇರಿಯ ಪ್ರಭಾರಿ ಕಂದಾಯ ನಿರೀಕ್ಷಕ ಗುರು ಬಸವರಾಜ ಅವರು ನೀಡಿದ ದೂರಿನನ್ವಯ ಎರಡು ಪ್ರಕರಣಗಳಲ್ಲಿ ದೂರು ದಾಖಲಾಗಿದೆ.