ವಿಜಯನಗರ:ರಾಜ್ಯ ಬಿಜೆಪಿ ವತಿಯಿಂದ ಆರಂಭಿಸಲಾಗಿರುವ ಜನಸಂಕಲ್ಪ ಯಾತ್ರೆಯ ಭಾಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ದಲಿತರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಉಪಾಹಾರ ಸೇವಿಸಿದರು.
ಕಮಲಾಪುರದ ಅಂಬೇಡ್ಕರ್ ಕಾಲೋನಿಯ ದಲಿತ ಮಹಿಳೆ ಯಲ್ಲಮ್ಮ ಕೊಲ್ಲಾರಪ್ಪ ಅವರ ಮನೆಯಲ್ಲಿ ಉಪ್ಪಿಟ್ಟು, ವಗ್ಗರಣಿ, ಮಿರ್ಚಿ ಸವಿದ ಮುಖ್ಯಮಂತ್ರಿಗಳು ಬಳಿಕ ಟೀ ಕುಡಿದರು. ಸಿಎಂ ಆಗಮನಕ್ಕೆ ಕಮಲಾಪುರದ ಅಂಬೇಡ್ಕರ್ ಕಾಲೋನಿಯು ವಿಶೇಷವಾಗಿ ಸಜ್ಜಾಗಿತ್ತು. ಸಿಎಂ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಶಾಸಕ ರಾಜುಗೌಡ ಸಾಥ್ ನೀಡಿದರು.
ದಲಿತರ ಮನೆಯಲ್ಲಿ ತಿಂಡಿ ಸವಿದ ಸಿಎಂ ಬೊಮ್ಮಾಯಿ ಉಪಾಹಾರ ಸೇವಿಸಿದ ನಂತರ ಅಂಬೇಡ್ಕರ್ ಕಾಲೋನಿಯಲ್ಲಿ ಸಿಎಂ ಸಂಚರಿಸಿ ಜನರ ಅಹವಾಲು ಆಲಿಸಿದರು. ಇದಾದ ಬಳಿಕ ಹೊಸಪೇಟೆಯತ್ತ ತೆರಳಿದರು. ಹೊಸಪೇಟೆಯ ವಾಲ್ಮೀಕಿ ಸಮುದಾಯದ ಬಾಹುಳ್ಯವಿರುವ ಐತಿಹಾಸಿಕ ಏಳು ಕೇರಿಗಳು ಎಂದು ಕರೆಯುವ ಪ್ರದೇಶದಲ್ಲಿ ಸಿಎಂ ಆದಿಯಾಗಿ ಎಲ್ಲ ನಾಯಕರು ಸಂಚಾರ ಮಾಡಿದರು.
ಕೇರಿಯಲ್ಲಿರುವ ಮಹರ್ಷಿ ವಾಲ್ಮೀಕಿ, ಏಕಲವ್ಯ, ಮದಕರಿ ನಾಯಕನ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ರೋಡ್ ಶೋ ಮಾದರಿಯಲ್ಲಿ ಬಿಜೆಪಿ ನಾಯಕರ ಸಂಚಾರ ನಡೆಯಿತು. ಈ ವೇಳೆ ಸಾರ್ವಜನಿಕರು ಪುಷ್ಪ ವೃಷ್ಠಿಗೈದು ಸಿಎಂ ಮತ್ತು ಬಿಜೆಪಿ ನಾಯಕರನ್ನು ಸ್ವಾಗತಿಸಿದರು. ಸಿಎಂ ಬೊಮ್ಮಾಯಿ ಅವರನ್ನು ಜನರು ಗೌರವಿಸಿದರು.
ಓದಿ:ಇಂದು ಚಳ್ಳಕೆರೆಯಿಂದ ಭಾರತ್ ಜೋಡೋ ಪಾದಯಾತ್ರೆ: ರಾಹುಲ್ ಎದುರು ವಿದ್ಯಾರ್ಥಿನಿ ಭರತನಾಟ್ಯ