ಬೆಳಗಾವಿ :ಜಿಲ್ಲೆಯ ಲೋಕಸಭೆ ಉಪ ಚುನಾವಣೆಯ ಬಿಜೆಪಿ ಟಿಕೆಟ್ಗಾಗಿ ಘಟಾನುಘಟಿ ನಾಯಕರೇ ದೆಹಲಿಯಲ್ಲಿ ಠಿಕಾಣಿ ಹೂಡಿ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಪೈಪೋಟಿ ನಡೆಸುತ್ತಿರುವ ಮಧ್ಯೆ ಬೆಳಗಾವಿಯಲ್ಲಿ ಸ್ವಾಮೀಜಿಯೊಬ್ಬರು ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿಯಿಂದ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ ಸ್ವಾಮೀಜಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬರಡೋಲ ಗ್ರಾಮದ ವೆಂಕಟೇಶ್ವರ ಮಹಾಸ್ವಾಮೀಜಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಎರಡು ನಾಮಪತ್ರ ಹಾಗೂ ಹಿಂದೂಸ್ತಾನ್ ಜನತಾ ಪಾರ್ಟಿಯಿಂದ ಒಂದು ನಾಮಪತ್ರ ಸೇರಿ ಮೂರು ನಾಮಪತ್ರ ಸಲ್ಲಿಸಿದ್ದಾರೆ.
ವಿಶೇಷ ಅಂದ್ರೆ ಭಾರತೀಯ ಜನತಾ ಪಕ್ಷದಿಂದ ಸ್ವಾಮೀಜಿಯಿಂದ ಸಲ್ಲಿಕೆಯಾಗಿರುವ ಎರಡು ನಾಮಪತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಅವರನ್ನು ಸೂಚಕರನ್ನಾಗಿಸಲಾಗಿದೆ.
ಮತ್ತೊಂದೆಡೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಶ್ರೀಕಾಂತ್ ಪಡಸಲಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರು ಅಭ್ಯರ್ಥಿಗಳಿಂದ ಇಂದು ಒಟ್ಟು ನಾಲ್ಕು ನಾಮಪತ್ರ ಸಲ್ಲಿಕೆಯಾಗಿವೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಅವರು ನಾಮಪತ್ರಗಳನ್ನು ಸ್ವೀಕರಿಸಿದರು.