ಅಥಣಿ:ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಹಬ್ಬ-ಹರಿದಿನಗಳನ್ನು ವಿಭಿನ್ನವಾಗಿ ಆಚರಿಸುವ ಸಂಪ್ರದಾಯವಿದೆ. ಈ ಭಾಗದ ಜವಾರಿ ಮಂದಿ, ದಸರಾವನ್ನೂ ಆಚರಿಸಿದ್ದು ಹೇಗೆ ಗೊತ್ತೇ?
ಬೆಳಗಾವಿಯ ಅಥಣಿಯ ಜನರು ಬನ್ನಿ ಮರವನ್ನು ಪವಿತ್ರವೆಂದು ಪರಿಗಣಿಸುತ್ತಿದ್ದು, ಅದರ ಎಲೆಗಳನ್ನು ಬಂಗಾರವೆಂದು ನಂಬಿ ಪೂಜಿಸುತ್ತಾರೆ. ಹೀಗಾಗಿ ಈ ಬಂಗಾರವನ್ನು, ಪ್ರತಿ ಮನೆ-ಮನೆಗೆ ಹೋಗಿ ಪರಸ್ಪರ ವಿನಿಮಯ ಮಾಡಿಕೊಂಡು, ನಿಮ್ಮ ಬಾಳು ಬಂಗಾರವಾಗಲಿ ಎಂದು ಹಾರೈಸುತ್ತಾರೆ.
ಇದಕ್ಕೂ ಮುಂಚೆ ನೊಗ- ನೇಗಿಲು ಸೇರಿದಂತೆ ವಿವಿಧ ಕೃಷಿ ಸಂಬಂಧಿ ಸಲಕರಣೆಗಳನ್ನು ಪೂಜಿಸುವ 'ಖಂಡಿ ಪೂಜೆ'ಯನ್ನು ಈ ಭಾಗದಲ್ಲಿ ಅರ್ಥಪೂರ್ಣವಾಗಿ ಮಾಡಲಾಗುತ್ತದೆ. ಕೃಷಿಗೆ ಬಳಸುವ ವಿವಿಧ ಲೋಹದ ವಸ್ತುಗಳನ್ನು ತೊಳೆದು, ಅವುಗಳಿಗೆ ಪೂಜೆ ನಡೆಸಲಾಗುತ್ತದೆ. ಬಳಿಕ ಬನ್ನಿ ಮರದ ಪೂಜೆ ನೆರವೇರುತ್ತದೆ. ಪೂಜೆಯ ಬಳಿಕ ಮರದ ಎಲೆಗಳನ್ನು ಕಿತ್ತು ಇತರರಿಗೆ ವಿನಿಮಯ ಮಾಡಿಕೊಳ್ಳುತ್ತಾರೆ.
ಸಂಜೆ ವೇಳೆ ಗ್ರಾಮದೇವತೆಗೆ ಪೂಜೆ ಮಾಡಿ ಬನ್ನಿ ಎಲೆಗಳನ್ನು ದೇವರಿಗೆ ಅರ್ಪಿಸಿದ ನಂತರ, ಮನೆಯ ಹಿರಿಯರಿಗೆ ಬನ್ನಿ ಎಲೆ ನೀಡಿ, ನಾವು ನೀವು ಬಂಗಾರದಂಗೆ ಇರೋಣ ಎಂದು ಹೇಳಿ, ಹಿರಿಯರ ಕಾಲಿಗೆ ಕಿರಿಯರು ನಮಸ್ಕರಿಸುತ್ತಾರೆ.