ಬೆಳಗಾವಿ:ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ಎಂಟು ಅಪರಾಧಿಗಳಿಗೆ ಇಲ್ಲಿನ ಕೋಕಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾರ್ಚ್ 30ರಂದು ಪ್ರಕರಣದಲ್ಲಿ 9 ಮಂದಿ ದೋಷಿಗಳು ಎಂದು ನ್ಯಾಯಾಧೀಶ ಸಿ.ಎಂ.ಜೋಶಿ ತೀರ್ಪು ಪ್ರಕಟಿಸಿದ್ದು, ಇದರಲ್ಲಿ ಎಂಟು ಮಂದಿಗೆ ಶಿಕ್ಷೆಯಾಗಿದೆ.
2013 ಡಿಸೆಂಬರ್ 21 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಉದ್ಯಮಿ ಆರ್.ಎನ್.ನಾಯಕ ಅವರನ್ನು ಕೊಲೆ ಮಾಡಲಾಗಿತ್ತು. 3 ಕೋಟಿ ಹಫ್ತಾ ನೀಡದಿರುವುದಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಹಾಗೂ ಆತನ ಸಹಚರರು ಹತ್ಯೆಗೆ ಸಂಚು ರೂಪಿಸಿದ್ದರು. ಆರೋಪಿಗಳ ವಿರುದ್ಧ ಪೊಲೀಸರು ಕೋಕಾ ಕೇಸ್ ದಾಖಲಿಸಿ ತನಿಖೆ ನಡೆಸಿದ್ದರು. 9 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದು ಇದೀಗ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ,ಏಳನೇ ಆರೋಪಿ ಹಾಸನದ ಮಹೇಶ ಅಚ್ಛಂಗಿ, ಎಂಟನೇ ಆರೋಪಿ ಕೇರಳದ ಸಂತೋಷ ಎಂ.ಬಿ., ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, ಹತ್ತನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12ನೇ ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ್ ಕಶ್ಯಪ್‌ಗೆ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು.