ಬೆಳಗಾವಿ:ನಿಮಗೆ ಏಕೆ ಕೊಡಬೇಕು ಕಪ್ಪ ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತ, ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎಂದು ಗುಡುಗು ಹಾಕಿದ ಕನ್ನಡನಾಡಿನ ಸಾಹಸಿ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿದವರು, ಸ್ವಾತಂತ್ರ್ಯ ಸ್ವಾಭಿಮಾನದ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಅವರ ಹೆಂಡತಿ ರಾಣಿ ಚೆನ್ನಮ್ಮ. ತಮ್ಮ ಪುಟ್ಟ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿದ ಧೈರ್ಯ, ಸಾಹಸ ಚೆನ್ನಮ್ಮರನ್ನು ಅಜರಾಮರವಾಗಿಸಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ಸಾಮ್ರಾಜ್ಯ ತನ್ನದೇ ಆದ ಕೊಡುಗೆ ನೀಡಿದೆ. ಮಹಿಳೆಯೊಬ್ಬರು ಸಮರ್ಥ ಮುಂದಾಳತ್ವ ವಹಿಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ವಿಶೇಷ. ಕಿತ್ತೂರಿನ ಇತಿಹಾಸ ಕ್ರಿ.ಶ. 1586 ರಿಂದಲೇ ಆರಂಭವಾಗುತ್ತದೆ. ಆದರೇ ಇದು ಪ್ರಸಿದ್ಧಿ ಪಡೆದಿದ್ದು ಮಾತ್ರ ಬ್ರಿಟಿಷ್ ವಿರುದ್ಧದ ಹೋರಾಟದಿಂದ. ಮಲಸರ್ಜನ ದೇಸಾಯಿ ಪತ್ನಿಯಾಗಿ ರಾಣಿ ಚೆನ್ಮಮ್ಮ ಕಿತ್ತೂರು ಸಂಸ್ಥಾನಕ್ಕೆ ಬರುತ್ತಾರೆ. ಕೆಲವೇ ವರ್ಷಗಳಲ್ಲಿ ಮಲಸರ್ಜನ ದೇಸಾಯಿ ಪೇಶ್ವೆಗಳಿಂದ ಬಂಧನಕ್ಕೆ ಒಳಗಾಗಿ ಮೂರು ವರ್ಷ ಕಾರಾಗೃಹ ಶಿಕ್ಷೆ ಅನುಭವಿಸುತ್ತಾರೆ. ಪುಣೆಯಿಂದ ತಪ್ಪಿಸಿಕೊಂಡು ಬರುವ ಸಂದರ್ಭದಲ್ಲಿ ಮಲಸರ್ಜನ ದೇಸಾಯಿ ಅರಬಾವಿ ಬಳಿ ಮೃತಪಟ್ಟರು.
ರಾಜ್ಯಭಾರ ಹೊತ್ತ ಚೆನ್ನಮ್ಮ: ಅನಿವಾರ್ಯವಾಗಿ ಸಂಸ್ಥಾನ ರಾಜ್ಯಭಾರವನ್ನು ರಾಣಿ ಚೆನ್ನಮ್ಮ ವಹಿಸಿಕೊಳ್ಳುತ್ತಾರೆ. ಮಾಸ್ತಮರಡಿ ಗೌಡ ಮನೆತನದ ಶಿವಲಿಂಗ ರುದ್ರಸರ್ಜನನ್ನು ದತ್ತು ಪಡೆದು ಆತನನ್ನು ರಾಜರ ಸ್ಥಾನದಲ್ಲಿ ಕೂರಿಸಿ ಚೆನ್ನಮ್ಮ ಆಡಳಿತ ನಡೆಸುತ್ತಾರೆ. ಈ ಸಂದರ್ಭದಲ್ಲಿ ಬ್ರಿಟಿಷರು ದತ್ತು ಮಕ್ಕಳಿಗೆ ಯಾವುದೇ ಹಕ್ಕಿಲ್ಲ ಎನ್ನುವ ನಿಯಮ ಜಾರಿಗೆ ತಂದಿರುತ್ತಾರೆ. ಈ ನಿಯಮವನ್ನು ಕಿತ್ತೂರು ಸ್ಥಾನದ ಮೇಲೆ ಜಾರಿ ಮಾಡುತ್ತಾರೆ. ಇದಕ್ಕೆ ಕಿತ್ತೂರಿನ ರಾಣಿ ಚೆನ್ನಮ್ಮ ಒಪ್ಪದೇ ಇದ್ದಾಗ ಕಿತ್ತೂರು ಹಾಗೂ ಬ್ರಿಟಿಷರ ನಡುವೆ ಸಂಘರ್ಷ ಆರಂಭವಾಗುತ್ತದೆ.
ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ರಾಣಿ: ಧಾರವಾಡ ಕಲೆಕ್ಟರ್ ಆಗಿದ್ದ ಥ್ಯಾಕರೆ ಬಂದು ಕಿತ್ತೂರಿಗೆ ಮಲ್ಲಪ್ಪ ಶೆಟ್ಟಿ, ವೆಂಕಟರಾವ್ ಅವರನ್ನು ಸಂಸ್ಥಾನದ ಆಡಳಿತ ಅಧಿಕಾರಿಯನ್ನಾಗಿ ನೇಮಕ ಮಾಡುತ್ತಾರೆ. ಕಿತ್ತೂರಿನ ಭಂಡಾರಕ್ಕೆ ಬೀಗಮುದ್ರೆ ಹಾಕುತ್ತಾರೆ. ಆಗಲೇ ಬ್ರಿಟಿಷರ ವಿರುದ್ಧ ಗಟ್ಟಿ ಧ್ವನಿಯೊಂದು ಹೊರ ಹೊಮ್ಮಿತ್ತು. ಯಾವಾಗ ಬ್ರಿಟಿಷ್ ಅಧಿಕಾರಿಯ ಮಾತಿಗೆ ಚೆನ್ನಮ್ಮ ಸೊಪ್ಪು ಹಾಕಲಿಲ್ಲವೋ ಆಗಲೇ ಬ್ರಿಟಿಷರು ಕಣ್ಣು ಕೆಂಪಗಾಗುತ್ತವೆ. ಕಿತ್ತೂರು ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಲು ಇನ್ನಿಲ್ಲದ ಯತ್ನ ಆರಂಭಿಸುತ್ತಾರೆ.
1824ರ ಅಕ್ಟೋಬರ್ 21ರಂದು ಥ್ಯಾಕರೆ ಕಿತ್ತೂರಿಗೆ ಬರುತ್ತಾರೆ. ಮೂರನೆಯ ದಿನ ಅಂದರೆ ಅಕ್ಟೋಬರ್ 23ರಂದು ಕೋಟೆಯ ಮೇಲೆ ತೋಪು ಹಾರಿಸಲು ತಮ್ಮ ಸೈನ್ಯಕ್ಕೆ ಅಪ್ಪಣೆ ಕೊಡುತ್ತಾರೆ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳತ್ವದಲ್ಲಿ ಥ್ಯಾಕರೆಯ ಸೈನ್ಯದ ಮೇಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕರ ಗುಂಡಿಗೆ ಥ್ಯಾಕರೆ ಬಲಿಯಾದರು. ಆತನ ಜತೆಗೆ ಬಂದಿದ್ದ ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು.