ಬೆಳಗಾವಿ: ಧರ್ಮಸ್ಥಳ, ಇಸ್ಕಾನ್ಗಳಲ್ಲಿ ಹೊಸ ವರ್ಷ ಆಚರಣೆ ಮಾಡಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಇಸ್ಕಾನ್ ಆಡಳಿತ ಮಂಡಳಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಡಾ. ವೀರೇಂದ್ರ ಹೆಗ್ಗಡೆ, ಇಸ್ಕಾನ್ ಕ್ಷಮೆಗೆ ಮುತಾಲಿಕ ಆಗ್ರಹ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾದಲ್ಲಿ ಸುಮಾರು 400ಕ್ಕೂ ಹೆಚ್ಚು ದೇವಸ್ಥಾನವನ್ನು ಕ್ರೈಸ್ತರು ಧ್ವಂಸಗೊಳಿಸಿದ್ದಾರೆ. ಅಂತಹ ಕ್ರೈಸ್ತರು ಆಚರಿಸುವ ಹೊಸ ವರ್ಷವನ್ನು ಧರ್ಮಸ್ಥಳ ಮತ್ತು ಇಸ್ಕಾನ್ ದೇವಾಲಯಗಳಲ್ಲಿ ಆಚರಿಸಲಾಗಿದೆ. ಈ ಕೂಡಲೇ ಡಾ. ವೀರೇಂದ್ರ ಹೆಗಡೆಯವರು ಮತ್ತು ಇಸ್ಕಾನ್ ಆಡಳಿತ ಮಂಡಳಿ ಬಹಿರಂಗವಾಗಿ ಕ್ಷಮೆ ಕೇಳಿ ಮುಂದೆ ಆಚರಿಸದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಮುತಾಲಿಕ್ ಎಚ್ಚರಿಸಿದರು.
ಓದಿ-ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಭೇಟಿಯಾದ ಪ್ರೊ. ಕೆ ಎಸ್ ಭಗವಾನ್
ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಾರ್ಹ
ರಾಜ್ಯ ಸರಕಾರದ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರ ಮಾಡಿರುವುದು ಸ್ವಾಗತಾರ್ಹ. ಗೋ ರಕ್ಷಕರ ಮೇಲೆ ಕ್ರಮ ಜರುಗಿಸಬಾರದೆಂದು ಸಹ ತಿಳಿಸಿದ್ದಾರೆ. ಗೋ ಹತ್ಯೆ ಮತ್ತು ಮಾಂಸ ಸಾಗಣೆ ಮಾಡುವಾಗ ಸಿಕ್ಕಲ್ಲಿ ನ್ಯಾಯಾಲಯದಲ್ಲಿಯೇ ದಂಡ ಭರಿಸಿ ತೆಗೆದುಕೊಂಡು ಹೋಗುವಂತೆ ತಿಳಿಸಿದೆ ಎಂದರು.
ವಯಸ್ಸಿನ ಹಿನ್ನೆಲೆಯಲ್ಲಿ ಗೋಗಳ ಮಾರಾಟ ಮಾಡಲು ಅವಕಾಶ ನೀಡಿದೆ, ಅದು ಆಗಬಾರದು. ಸಂಪೂರ್ಣ ಗೋ ಹತ್ಯೆ ನಿಷೇಧ ಮಾಡಬೇಕು. ಚೆಕ್ ಪೋಸ್ಟ್ನಲ್ಲಿ ಗೋವುಗಳನ್ನು ತಪಾಸಣೆ ಮಾಡಿ ಬಿಟ್ಟರೆ ಅಲ್ಲಿಯೇ ಗೋವುಗಳ ರಕ್ಷಣೆ ಮಾಡಬೇಕೆಂದು ಸರಕಾರಕ್ಕೆ ಸಲಹೆ ನೀಡಿದರು.
ಪಿಎಫ್ಐ ಸಂಘಟನೆ ಬ್ಯಾನ್ ಮಾಡಬೇಕು
ಕರ್ನಾಟಕದಲ್ಲಿ ಈಗಾಗಲೇ 26 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಅದರಲ್ಲಿ ಪಿಎಫ್ಐ ಸಂಘಟನೆಯ ಪ್ರಮುಖರ ಕೈವಾಡ ಇರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರಕಾರ ಸಂಪೂರ್ಣ ಬ್ಯಾನ್ ಮಾಡಬೇಕು ಇಲ್ಲದಿದ್ದರೆ ಶ್ರೀರಾಮ ಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.