ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ರಾಜಕೀಯ ದುರುದ್ದೇಶಪೂರಿತವಾಗಿದ್ದು, ಅದಕ್ಕೆ ನಮ್ಮ ವಿರೋಧ ಇದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ಬೆಳಗಾವಿ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಯಾವುದೇ ಧರ್ಮ ಪಾಲನೆ ಮಾಡುವ ಅವಕಾಶದ ಬಗ್ಗೆ ನಮ್ಮ ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಆದ್ರೆ ಬಲವಂತದ ಮತಾಂತರಕ್ಕೆ ಮಾತ್ರ ಅವಕಾಶವಿಲ್ಲ. ಬಲವಂತದಿಂದ ಮಾಡಿದರೆ ತಪ್ಪು. ಈಗ ಕಾಯ್ದೆ ತರುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
ಯಾವುದೋ ಧರ್ಮ, ಜಾತಿಯವರನ್ನು ಗುರಿಯಾಗಿರಿಸಿಕೊಂಡು ಅವರಿಗೆ ತೊಂದರೆ ಕೊಡುವ ಉದ್ದೇಶ ಇದರ ಹಿಂದಿದೆ. ವಿಧೇಯಕದ ಪ್ರಸ್ತಾವನೆಯನ್ನೇ ವಿರೋಧ ಮಾಡುತ್ತೇವೆ. ಈ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಮತಾಂತರ ನಿಷೇಧ ಕಾಯ್ದೆ ತರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮದ ಆಧಾರದಲ್ಲಿ ಜನರನ್ನು ನೋಡಲ್ಲ. ಎಲ್ಲ ಜಾತಿ, ಧರ್ಮದವರನ್ನು ಮನುಷ್ಯತ್ವದಲ್ಲಿ ನೋಡುತ್ತೇವೆ ಎಂದರು.
ಪ್ರವಾಹದಿಂದ ಬೆಳೆ ಹಾನಿಯಾಗಿದೆ. ರಸ್ತೆ, ಸೇತುವೆ ಹಾನಿಯಾಗಿದೆ. ಆದರೆ ಯಾರಿಗೂ ಪರಿಹಾರ ಸಿಕ್ಕಿಲ್ಲ. ಅದರ ಬಗ್ಗೆ ಚರ್ಚೆಗೆ ಕೇಳಿದ್ದೇವೆ. ಬಿಟ್ ಕಾಯಿನ್, ಭ್ರಷ್ಟಾಚಾರದ ಆರೋಪ ಇದೆ. ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಚರ್ಚೆ ನಡೆಸುತ್ತೇನೆ. ನಂತರ ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಜತೆಗೆ 40% ಕಮಿಷನ್ ಬಗ್ಗೆಯೂ ಪ್ರಸ್ತಾಪ ಮಾಡ್ತೇವೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ 'ಸುವರ್ಣ' ಪಾದಯಾತ್ರೆಗೆ ಪೊಲೀಸರಿಂದ ತಡೆ : ಖಾಕಿ ವಿರುದ್ಧ ಮಾಜಿ ಸಿಎಂ ಗರಂ