ಬೆಳಗಾವಿ :ನಾಳೆ (ಶನಿವಾರ) ನಡೆಯುವ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಉತ್ಸವದಲ್ಲಿ ಸಿಎಂ 'ಕಿತ್ತೂರು ಕರ್ನಾಟಕ' ಎಂದು ಘೋಷಣೆ ಮಾಡುವ ಭರವಸೆ ಇದೆ ಎಂದು ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ.. ಕಿತ್ತೂರು ಕಲ್ಮಠದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಶ್ರೀಗಳು, ವೀರ ರಾಣಿ ಕಿತ್ತೂರು ಚೆನ್ನಮ್ಮನ ಉತ್ಸವ ಕೇವಲ ಉತ್ಸವವಲ್ಲ. ಅದೊಂದು ಸ್ವಾಭಿಮಾನ, ಸ್ವಾತಂತ್ರ್ಯ, ಸಂಸ್ಕೃತಿಯ ಸಂಕೇತ. ಕೊರೊನಾ ಹಿನ್ನೆಲೆ ಎರಡು ವರ್ಷಗಳ ಬಳಿಕ ಕಿತ್ತೂರು ಉತ್ಸವ ನೆರವೇರುತ್ತಿದೆ.
ಸರ್ಕಾರದಿಂದ ನಡೆಸಲಾಗುತ್ತಿರುವ 2020-21ರ ಕಿತ್ತೂರು ಉತ್ಸವಕ್ಕೆ 25 ವರ್ಷಗಳು ಕಳೆದಿವೆ. 25 ವರ್ಷಗಳ ತುಂಬಿದ ಸ್ಮರಣಾರ್ಥ ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ. ಸಿಎಂ ಬೊಮ್ಮಾಯಿ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಮತ್ತೊಂದು ವಿಶೇಷ ಎಂದರು.
ಅಭಿವೃದ್ಧಿ ದೃಷ್ಟಿಯಿಂದ ಕಿತ್ತೂರು ಪ್ರವಾಸಿ ತಾಣವಾಗಿ ಬದಲಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ 200 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಿತ್ತೂರಿನ ಕೋಟೆ, ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಿತ್ತೂರು ಕರ್ನಾಟಕ ಆಗಬೇಕು ಎಂಬುದು ಈ ನಾಡಿನ ಜನರ ಬಹು ದಿನಗಳ ಬೇಡಿಕೆ. ಸರ್ಕಾರ ಆದಷ್ಟು ಬೇಗ ಘೋಷಣೆ ಮಾಡಬೇಕು ಎಂದರು.
ಇದನ್ನೂ ಓದಿ:ಅ. 23 ರಿಂದ ಎರಡು ದಿನಗಳ ಕಿತ್ತೂರು ಉತ್ಸವ ಆಚರಣೆ: ಸಚಿವ ಗೋವಿಂದ ಕಾರಜೋಳ