ಚಿಕ್ಕೋಡಿ:ಮಂಡ್ಯ ಜಿಲ್ಲೆಯನ್ನು ಹೊರತು ಪಡಿಸಿದರೆ ಅತಿ ಹೆಚ್ಚಾಗಿ ಕೃಷ್ಣಾ ನದಿ ತೀರದ ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಕಾಗವಾಡ, ನಿಪ್ಪಾಣಿ, ಚಿಕ್ಕೋಡಿ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಕಬ್ಬು. ಆದರೆ, ಪ್ರಸಕ್ತ ವರ್ಷ ಕಳೆದ ಮೂರು ತಿಂಗಳುಗಳಿಂದ ಕೃಷ್ಣೆ ಸೇರಿದಂತೆ ಉಪನದಿಗಳು ಸಂಪೂರ್ಣ ಬತ್ತಿ ಹೋಗಿರುವ ಪರಿಣಾಮವಾಗಿ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಬೆಳೆದಿರುವ ಶೇ 40ಕ್ಕೂ ಹೆಚ್ಚು ಕಬ್ಬು ಬೆಳೆ ಸಂಪೂರ್ಣ ಒಣಗಿ ಹೋಗಿದ್ದು, ರೈತರ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ.
ಕೃಷ್ಣಾ ತೀರದಲ್ಲಿ ಒಣಗಿದ ಕಬ್ಬು : ಚಿಂತಾಕ್ರಾಂತರಾಗಿ ತಲೆ ಮೇಲೆ ಕೈಹೊತ್ತ ಅನ್ನದಾತ
ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ಸೇರಿದಂತೆ ಪಂಚನದಿಗಳು ಹರಿಯುತ್ತಿದ್ದರೂ ಅನಾವೃಷ್ಟಿಯಿಂದಾಗಿ ನದಿಗಳು ಬತ್ತಿ ಹೋಗಿವೆ. ಬೆಳೆಗೆ ಸಕಾಲದಲ್ಲಿ ನೀರಾವರಿ ಸೌಕರ್ಯ ದೊರಕದೆ ಕಬ್ಬು ಹಾಳಾಗಿದ್ದು, ಶೇ 40ಕ್ಕೂ ಹೆಚ್ಚು ಕಬ್ಬು ಬೆಳೆ ಸಂಪೂರ್ಣ ಒಣಗಿ ಹೋಗಿದ್ದು,ಇದರಿಂದಾಗಿ ರೈತರ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ.
ಪ್ರಸಕ್ತ ವರ್ಷ ದೂಧಗಂಗಾ ನದಿಯನ್ನು ಹೊರತುಪಡಿಸಿ, ಕೃಷ್ಣಾ ನದಿ ತೀರದ ಹಾಗೂ ಇನ್ನುಳಿದ ಕಡೆಗಳಲ್ಲಿ ಕಬ್ಬು ಬೆಳೆಗೆ ನೀರಿಲ್ಲದೆ ಸಂಪೂರ್ಣ ಒಣಗಿ ಹೋಗುತ್ತಿವೆ. ಇದರ ಪರಿಣಾಮವಾಗಿ ಬರುವ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ತೊಂದರೆ ಅನುಭವಿಸುವ ಪ್ರಸಂಗ ಬಂದೊದಗಲಿದೆ. ಬೇಸಿಗೆ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರಿಂದಾಗಿ ಸುಮಾರು ಶೇ 40ರಷ್ಟು ಕಬ್ಬು ನಾಶವಾಗಿದೆ.
ಪ್ರತಿ ಎಕೆರೆಗೆ ಕಬ್ಬು ಬೆಳೆಯಲು 30 ಸಾವಿರದಿಂದ 35 ಸಾವಿರ ಖರ್ಚಾಗುತ್ತದೆ. ಒಂದು ಎಕರೆ ಕ್ಷೇತ್ರದಲ್ಲಿ 40 ಟನ್ ಕಬ್ಬು ಇಳುವರಿ ಪಡೆದರೆ, ಒಂದು ಟನ್ ಕಬ್ಬಿಗೆ 2,500 ರೂ ದರ ಇದೆ. ಅದರಂತೆ ಒಬ್ಬ ಚಿಕ್ಕ ರೈತ ಒಂದು ಎಕರೆ ಕಬ್ಬು ನಾಶವಾದರೂ 1 ಲಕ್ಷ ರೂಪಾಯಿ ಕಳೆದು ಕೊಳ್ಳುತ್ತಿದ್ದಾನೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದ ರೈತರು ಸಾವಿರಾರು ಎಕರೆಗಳಲ್ಲಿ ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸುತ್ತಿದ್ದಾರೆ.
ಇದರಿಂದ ಈ ಭಾಗದ ಕೆಲ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಲು ಸಾಧ್ಯವಾಗದೇ ಕೆಲ ತಿಂಗಳ ಕಾಲ ಮಾತ್ರ ಕಾರ್ಖಾನೆಗಳು ನಡೆಯಬಹುದಾಗಿದೆ. ಅಲ್ಲದೇ ಕಬ್ಬು ಕಟಾವು ಮಾಡಲು ಇಲ್ಲಿನ ರೈತರಿಗೆ ಕೆಲಸ ಸಿಗುತ್ತಿತ್ತು. ಅದು ಕೂಡಾ ಈ ಬಾರಿ ಇಲ್ಲದಂತಾಗಿದೆ ಹಾಗೂ ಬೇರೆ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಕಾರ್ಖಾನೆಗಳಿಗೆ ಕಬ್ಬು ಕಟಾವು ಮಾಡಲು ಬರುವಂತ ರೈತರಿಗೂ ಈ ವರ್ಷ ನಿರಾಸೆ ತಂದಿದೆ.
TAGGED:
Chikkodi_sanjay