ಬೆಳಗಾವಿ: ತಾಲೂಕಿನ ಅನಗೋಳ ಲೋಹಾರ್ ಗಲ್ಲಿಯ ನಿವಾಸಿ, ಶಹನಾಯಿ ಕಲಾವಿದ ಬಾಬುರಾವ್ ವಾಜಂತ್ರಿಯವರಿಗೆ ಡಿವೈನ್ ಹೆಲ್ಪಿಂಗ್ ಹ್ಯಾಂಡ್ ಗೆಳೆಯರು ಸಹಾಯಹಸ್ತ ಚಾಚಿದ್ದಾರೆ.
ಶಹನಾಯಿ ಕಲಾವಿದನಿಗೆ ಆಸರೆಯಾದ ಡಿವೈನ್ ಹೆಲ್ಪಿಂಗ್ ಹ್ಯಾಂಡ್ ಕೊರೊನಾ ಹೊಡೆತಕ್ಕೆ ನಲುಗಿ ದೇಶದೆಲ್ಲೆಡೆ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆಗೂ ಪರದಾಡುವಂತಾಗಿದೆ. ಬಾಬುರಾವ್ ಕೂಡ ತಗಡಿನ ಶೆಡ್ನಲ್ಲಿ ವಾಸಿವಿದ್ದು, ಹೊಟ್ಟೆಪಾಡಿಗಾಗಿ ಮದುವೆ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಶಹನಾಯಿ ನುಡಿಸಿ ಬಂದ ಹಣದಿಂದಲೇ ಜೀವನ ನಡೆಸಿಸುತ್ತಿದ್ದರು. ಆದರೆ ಕೊರೊನಾದಿಂದಾಗಿ ಬಾಬುರಾವ್ ಜೀವನ ನಿರ್ವಹಣೆ ಕಷ್ಟವಾಗಿತ್ತು. ಅವರು ವಾಸವಿದ್ದ ತಗಡಿನ ಶೆಡ್ ಕೂಡ ಮಳೆಯಿಂದಾಗಿ ಸಂಪೂರ್ಣ ಹಾನಿಗೊಳಗಾಗಿತ್ತು.
ಕಲಾವಿದನ ಸಂಕಷ್ಟದ ಬಗ್ಗೆ ತಿಳಿದ ಬೆಳಗಾವಿಯ ಡಿವೈನ್ ಹೆಲ್ಪಿಂಗ್ ಹ್ಯಾಂಡ್ ಗೆಳೆಯರ ಗುಂಪು, ಬಾಬುರಾವ್ ಅವರಿಗೆ ಸ್ವಂತ ಮನೆ ನಿರ್ಮಿಸಿಕೊಟ್ಟಿದೆ. ದಾನಿಗಳು ಸಹ ನೆರವಾಗಿ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಡಿವೈನ್ ಹೆಲ್ಪಿಂಗ್ ಹ್ಯಾಂಡ್ ಗೆಳೆಯರ ಬಳಗದ ಸದಸ್ಯ ವಿನಯ ಲಾಸೆ ಮಾತನಾಡಿ, ಮಾನವರು ಮಾನವರಿಗೆ ನೆರವಾಗುವ ಈ ಕಾರ್ಯ ತೃಪ್ತಿ ತಂದಿದೆ. ಕಲಾವಿದನಿಗೆ ನೆರವಾಗುವ ಈ ಕಾರ್ಯದಲ್ಲಿ ಇಷ್ಟೊಂದು ಗೆಳೆಯರು ಕೈ ಜೋಡಿಸಿದ್ದಾರೆ ಎನ್ನುವುದು ಖುಷಿಯ ಸಂಗತಿ ಎಂದಿದ್ದಾರೆ.
ಡಿವೈನ್ ಹೆಲ್ಪಿಂಗ್ ಹ್ಯಾಂಡ್ ಗ್ರೂಪ್‍ನ ಅಧ್ಯಕ್ಷ ಗಜಾನನ ಗವಾನೆ ಮಾತನಾಡಿ, ಶಹನಾಯಿ ಕಲಾವಿದ ಬಾಬುರಾವ್ ಅವರ ಕಷ್ಟ ತಿಳಿದು ಗೆಳೆಯರ ಜೊತೆ ಮಾತನಾಡಿದೆ. ಬಳಿಕ ಅನೇಕ ಗೆಳೆಯರು ನೆರವು ನೀಡಲು ಮುಂದೆ ಬಂದರು. ಎಷ್ಟೋ ಮಂಗಳ ಕಾರ್ಯಗಳಿಗೆ ಧ್ವನಿಯಾದ ಕಲಾವಿದನಿಗೆ ನೆರವಾಗಿರುವುದು ನೆಮ್ಮದಿ ನೀಡಿದೆ ಎಂದರು.