ಮೂರು ವರ್ಷದ ಬುದ್ಧಿಮಾಂದ್ಯ ಮಗುವಿನ ಕೊಲೆ ಆರೋಪ : ಮೂವರ ವಿರುದ್ಧ ದೂರು ದಾಖಲು
ಬುದ್ದಿಮಾಂದ್ಯ ಮಗುವನ್ನು ಕೊಲೆ ಮಾಡಿರುವ ಆರೋಪಡಿ ಮೂವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚಿಕ್ಕೋಡಿ : ಮೂರು ವರ್ಷದ ಮಗುವನ್ನು ಕೊಲೆ ಮಾಡಿರುವ ಆರೋಪದ ಮೇಲೆ ಪೋಷಕರು ಹಾಗೂ ವೈದ್ಯರು ಸೇರಿ ಮೂವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿವಾಹಕ್ಕೂ ಮುನ್ನ ಹುಟ್ಟಿದ್ದ ಬುದ್ಧಿಮಾಂದ್ಯ ಹಾಗೂ ವಿಕಲಚೇತನ ಮಗು ಆರೋಗ್ಯವಂತವಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದ ಪೋಷಕರು ಕಾನೂನು ಬಾಹಿರವಾಗಿ 2 ಲಕ್ಷಕ್ಕೆ ಹುಬ್ಬಳ್ಳಿಯ ಸುವರ್ಣಲತಾ ಗದಿಗೆಪ್ಪಗೌಡರ ಅವರಿಗೆ ದತ್ತು ನೀಡಿದ್ದರು.
ಚಿಕ್ಕೋಡಿಯ ವೈದ್ಯ ಮಾರುತಿ ಮುಸಾಳೆ ಹಾಗೂ ಅವರ ಪತ್ನಿ ರೇಖಾ ಮುಸಾಳೆ ಎಂಬುವರ ಮಧ್ಯಸ್ಥಿಕೆಯಲ್ಲಿ ದತ್ತು ಪಡೆದಿದ್ದ ಸುವರ್ಣಲತಾ, ಕೆಲ ದಿನಗಳ ನಂತರ ಮಗು ಬುದ್ದಿಮಾಂದ್ಯ ಹಾಗೂ ಅಂಗವಿಕಲ ಎಂದು ತಿಳಿದು, ಚಿಕ್ಕೋಡಿ ವೈದ್ಯರ ಮಧ್ಯಸ್ಥಿಕೆಯಲ್ಲಿ ಮಗುವನ್ನು ದತ್ತು ಪಡೆದಿದ್ದರಿಂದ ಅದೇ ವೈದ್ಯರಿಗೆ ಮರಳಿ ನೀಡಿದ್ದಾರೆ.
ಕೆಲ ದಿನಗಳ ನಂತರ ಮಗು ಸಾವನ್ನಪ್ಪಿದೆ ಎಂದು ಮಗುವಿನ ಅಜ್ಜ ರಾಮು ಚೌಗಲೆ, ವೈದ್ಯ ಮಾರುತಿ ಮುಸಾಳೆ, ರೇಖಾ ಮುಸಾಳೆ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ದರು. ಅದರೆ ಅಜ್ಜ ರಾಮು ಚೌಗಲೆ ಮಗುವನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಕುರಿತು ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದೂರು ನೀಡಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.