ಬೆಳಗಾವಿ: ಕೋವಿಡ್ ಹಾವಳಿ ಮಧ್ಯೆ ವಿಮಾನಗಳ ಹಾರಾಟ ಹಾಗೂ ಪ್ರಯಾಣಿಸಿದವರ ಸಂಖ್ಯೆಯಲ್ಲಿ ಜೂನ್ ತಿಂಗಳಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ರಾಜ್ಯದಲ್ಲೇ 2ನೇ ಸ್ಥಾನಕ್ಕೇರಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಜೂನ್ ತಿಂಗಳಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಿಂದ 391 ವಿಮಾನಗಳು ಹಾರಾಟ ನಡೆಸಿದ್ದು, 10,224 ಜನ ಪ್ರಯಾಣಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನ ಹಾಗೂ ಮಂಗಳೂರು ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿದೆ.
ಲಾಕ್ಡೌನ್ ಸಡಿಲಿಕೆ ಆದ ಬಳಿಕ ಮೇ 25ರಿಂದ ವಿಮಾನ ಹಾರಾಟ ಪುನರಾರಂಭ ಆಗಿದ್ದವು. ಅಂದಿನಿಂದ ಜುಲೈ 31ರವರೆಗೆ 855 ವಿಮಾನಗಳು ಹಾರಾಟ ನಡೆಸಿದ್ದು, 25,300 ಮಂದಿ ಪ್ರಯಾಣಿಸಿದ್ದಾರೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ್ ಮೌರ್ಯ ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕಿನ ಭೀತಿಯ ಕಾರಣ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್, ಇಂದೋರ್, ಮೈಸೂರು ಹಾಗೂ ಅಹಮದಾಬಾದ್‌ಗೆ ವಿಮಾನ ಸೇವೆ ಇದೆ.