ಬೆಳಗಾವಿ: ದಿವಂಗತ ನಟ ಪುನೀತ್ ರಾಜ್‍ಕುಮಾರ್ ಕೇವಲ ರಾಜ್‍ಕುಮಾರ್ ಮಗ ಎನ್ನುವ ಕಾರಣಕ್ಕೆ ಫೇಮಸ್ ಆಗಿದ್ದಲ್ಲ. ಅವರದ್ದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಸಿದ್ದರಾಮಯ್ಯ, ನಿತ್ಯ ಎರಡು ಗಂಟೆಗಳ ಕಾಲ ಪುನೀತ್ ವರ್ಕೌಟ್ ಮಾಡುತ್ತಿದ್ದರು. ಅವರು ಸಾಯುತ್ತಾರೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಇನ್ನೂ ದೀರ್ಘಕಾಲದವರೆಗೆ ಬದುಕಬೇಕಿದ್ದವರು. ಸರ್ಕಾರದ ಅನೇಕ ಇಲಾಖೆಗಳಲ್ಲಿ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದರು. ಪುನೀತ್ಗೆ ಪುನೀತ್ ಮಾತ್ರ ಸಾಟಿ ಎಂದು ಬಣ್ಣಿಸಿದರು.
ಪುನೀತ್ ರಾಜ್‍ಕುಮಾರ್ ತಂದೆಯನ್ನೂ ಮೀರಿ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಂದೆಯ ಎಲ್ಲ ಗುಣಗಳನ್ನು ಅಳವಡಿಸಿಕೊಂಡಿದ್ದರು. ಪುನೀತ್ ನನ್ನನ್ನು ಮಾಮಾ ಅಂತಾ ಕರೆಯುತ್ತಿದ್ದರು. ಮಾಮಾ ನನ್ನ 'ರಾಜಕುಮಾರ' ಸಿನಿಮಾ ನೋಡಲೇಬೇಕು ಎಂದು ಹೇಳಿದ್ದರು. ಪುನೀತ್ ಹೇಳಿದ್ದಕ್ಕೆ ನಾನು ಮೈಸೂರಿನ ಥಿಯೇಟರ್ಗೆ ಹೋಗಿ ರಾಜಕುಮಾರ ಸಿನಿಮಾ ನೋಡಿದ್ದೆ ಎಂದು ಹೇಳಿದರು.
ಹೆಲಿಕಾಪ್ಟರ್ ದುರಂತದ ತನಿಖೆ ಆಗಬೇಕು
ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದ ಬಗ್ಗೆ ತನಿಖೆ ಆಗಬೇಕು. ಈ ಬಗ್ಗೆ ಸಂಶಯ ಇದೆ. ರಷ್ಯಾ ನಿರ್ಮಿಸಿದ ಹೆಲಿಕಾಪ್ಟರ್ ಅದು. ಅಪಘಾತದ ಕಾರಣ ಏನು ಎಂಬುವುದು ತಿಳಿಯಬೇಕು. ಅಡ್ವಾನ್ಸ್ ಇಂಜಿನ್ ಹೆಲಿಕಾಪ್ಟರ್ ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬುವುದೇ ಆಶ್ಚರ್ಯ. ನಾನು ಯಾರ ಕೈವಾಡ ಇದೆ ಎಂಬ ಶಂಕೆ ಪಡುವುದಿಲ್ಲ.