ಬೆಳಗಾವಿ:ಪತಿಯ ಸಾವಿನ ಸುದ್ದಿ ತಿಳಿದು ಕೇವಲ ಒಂದೇ ತಾಸಿನಲ್ಲಿ ಪತ್ನಿಯೂ ಹೃದಯಾಘಾತದಿಂದ ನಿಧನರಾಗಿದ್ದು, ಸಾವಿನಲ್ಲೂ ವೃದ್ಧ ದಂಪತಿ ಒಂದಾಗಿದ್ದಾರೆ.
ಜಿಲ್ಲೆಯ ಭಾಗ್ಯ ನಗರದ ನಿವಾಸಿಗಳಾಗಿದ್ದ ನಿವೃತ್ತ ಶಿಕ್ಷಕ ಗುರುರಾಜ ಅಧ್ಯಾಪಕ (89) ಹಾಗೂ ಇವರ ಪತ್ನಿ ನಿವೃತ್ತ ಶಿಕ್ಷಕಿ ಅಲ್ಕಾ ಗುರುರಾಜ ಅಧ್ಯಾಪಕ (84) ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಪತಿ ಗುರುರಾಜ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಪತಿಯ ಸಾವಿನ ಸುದ್ದಿ ಪತ್ನಿಗೆ ಬರಸಿಡಿಲು ಬಡಿದಂತಾಗಿದೆ. ಈ ಆಘಾತದಿಂದ ಚೇತರಿಸಿಕೊಳ್ಳದ ಅಲ್ಕಾ ಅವರು, ಪತಿ ಸತ್ತ ಕೇವಲ 45 ನಿಮಿಷಗಳ ಅಂತರದಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಆ ಮೂಲಕ ದಂಪತಿ, ಸಾವಿನ ಬಳಿಕವೂ ಒಂದಾಗಿದ್ದಾರೆ. ಸಾವಿನ ಸುದ್ದಿ ತಿಳಿದ ಸ್ಥಳೀಯರು ಅವರ ಮನೆಗೆ ತೆರಳಿ ದಂಪತಿಯ ಮೃತದೇಹದ ಅಂತಿಮ ದರ್ಶನ ಪಡೆದರು.
ಗುರುರಾಜ ಅವರು ನಗರದ ಸರಸ್ವತಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರೆ, ಅಲ್ಕಾ ಅವರು ಗೋಮಟೇಶ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತ ವೃದ್ಧ ದಂಪತಿಯ ಅಂತ್ಯಸಂಸ್ಕಾರ ಇಂದು ನಡೆಯಲಿದೆ.