ಅಥಣಿ(ಬೆಳಗಾವಿ): ಪ್ರಸ್ತುತ ಬಿಜೆಪಿಯಲ್ಲಿ ಯಾವುದು ಸರಿ ಇಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬೆಳಗಾವಿ ಜಿಲ್ಲೆಯ ಮೂವರು ಪ್ರಭಾವಿ ನಾಯಕರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ. ಅವರೊಂದಿಗೆ ಒಟ್ಟು ನಾಲ್ವತ್ತು ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬರುತ್ತಿದ್ದಾರೆಂದು ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿಯಿಂದ ಶೀಘ್ರವೇ 40 ಶಾಸಕರು ಕಾಂಗ್ರೆಸ್ ಸೇರ್ತಾರೆ; ರಾಜು ಕಾಗೆ ಹೊಸ ಬಾಂಬ್! - ಕಾಗವಾಡ ಮಾಜಿ ಶಾಸಕ ರಾಜು ಕಾಗೆ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯಿಂದ 40 ಶಾಸಕರು ಶೀಘ್ರವೇ ಕಾಂಗ್ರೆಸ್ ಸೇರುತ್ತಾರೆ ಎಂದು ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅಥಣಿಯಲ್ಲಿ ಹೇಳಿದ್ದಾರೆ.
ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಳ ಜಗಳ ಹೆಚ್ಚಾಗಿದೆ, ಆಂತರಿಕ ಭಿನ್ನಾಭಿಪ್ರಾಯ ಇರುವುದರಿಂದ 40 ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಇಷ್ಟರಲ್ಲೇ ಬರುತ್ತಾರೆಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಕ್ಷೀಣವಾಗಿದ್ದು, ಸಂಪೂರ್ಣವಾಗಿ ಬಿಜೆಪಿ ಸರ್ಕಾರ ಜನ ವಿರೋಧಿಯಾಗಿದೆ. ದಿನನಿತ್ಯ ಬಳಸುವ ವಸ್ತುಗಳು ಬೆಲೆ ಏರಿಕೆಯಿಂದಾಗಿ ಜನರಿಗೆ ಬಿಜೆಪಿಯ ಮೇಲೆ ನಂಬಿಕೆ ಇಲ್ಲದಂತಾಗಿದೆ. ಇಪ್ಪತ್ತು ವರ್ಷಗಳಿಂದ ನಾನು ಶಾಸಕನಾಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಜನರ ನಾಡಿ ಮಿಡಿತ ನನಗೆ ಗೊತ್ತು ಎಂದು ಹೇಳಿದ್ದಾರೆ.