ನವದೆಹಲಿ : ಎಸ್ ಅಂಡ್ ಪಿ ರೇಟಿಂಗ್ಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ 6 ರಿಂದ ಶೇ 6.4ಕ್ಕೆ ಏರಿಸಿದೆ. "ಹೆಚ್ಚಿನ ಆಹಾರ ಹಣದುಬ್ಬರ ಮತ್ತು ಕಡಿಮೆ ರಫ್ತುಗಳಿಂದ ಉಂಟಾಗಬಹುದಾದ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳನ್ನು ದೃಢವಾದ ದೇಶೀಯ ಬೆಳವಣಿಗೆ ಸರಿದೂಗಿಸಿದೆ ಎಂದು ತೋರುತ್ತಿರುವುದರಿಂದ ಈ ಹಣಕಾಸು ವರ್ಷದಲ್ಲಿ ನಮ್ಮ ಜಿಡಿಪಿ ಬೆಳವಣಿಗೆ ಅಂದಾಜನ್ನು ಹೆಚ್ಚಿಸಿದ್ದೇವೆ" ಎಂದು ಎಸ್ &ಪಿ ಗ್ಲೋಬಲ್ ರೇಟಿಂಗ್ಸ್ನ ಏಷ್ಯಾ - ಪೆಸಿಫಿಕ್ ವಿಭಾಗದ ಮುಖ್ಯ ಅರ್ಥಶಾಸ್ತ್ರಜ್ಞ ಲೂಯಿಸ್ ಕುಯಿಜ್ಸ್ ಸಂಶೋಧನಾ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಮುಂದಿನ ಹಣಕಾಸು ವರ್ಷದಲ್ಲಿ (2024-25) ಬೆಳವಣಿಗೆಯ ಮುನ್ನೋಟವನ್ನು ಹಿಂದಿನ ಶೇಕಡಾ 6.9 ರಿಂದ ಶೇಕಡಾ 6.4 ಕ್ಕೆ ಎಸ್ ಅಂಡ್ ಪಿ ರೇಟಿಂಗ್ ಏಜೆನ್ಸಿ ಇಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2023-24) ಎಸ್ &ಪಿಯ ಹೆಚ್ಚಿನ ಅಂದಾಜು ಇತರ ಏಜೆನ್ಸಿಗಳು ಮಾಡಿದ ಅಂದಾಜಿಗೆ ಅನುಗುಣವಾಗಿದೆ. ಆದರೆ, ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಶೇಕಡಾ 6.5 ಕ್ಕಿಂತ ಕಡಿಮೆಯಾಗಿದೆ. ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿ ಮತ್ತು ಫಿಚ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯನ್ನು ಶೇಕಡಾ 6.3 ರಷ್ಟು ಬೆಳವಣಿಗೆಯಾಗುವ ಅಂದಾಜು ಮಾಡಿವೆ.