ಕರ್ನಾಟಕ

karnataka

ETV Bharat / business

2,000ದ ನೋಟು ವಿನಿಮಯಕ್ಕೆ ಆತುರ ಬೇಡ: ಗಡುವು ವಿಸ್ತರಣೆ ಸುಳಿವು ನೀಡಿದ ಆರ್​ಬಿಐ - ನೋಟು ವಿನಿಮಯ ಪ್ರಕ್ರಿಯೆ ಆರಂಭ

ಬ್ಯಾನ್​ ಆದ 2 ಸಾವಿರ ಮುಖಬೆಲೆಯ ನೋಟುಗಳನ್ನು ವಿನಿಮಿಯ ಮಾಡಿಕೊಳ್ಳಲು ತಕ್ಷಣವೇ ಬ್ಯಾಂಕ್​ಗಳಿಗೆ ಎಡತಾಕುವ ಅಗತ್ಯವಿಲ್ಲ ಎಂದು ಆರ್​ಬಿಐ ಗವರ್ನರ್​ ಹೇಳಿದರು.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

By

Published : May 22, 2023, 1:29 PM IST

Updated : May 22, 2023, 6:12 PM IST

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

ನವದೆಹಲಿ:2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ಹಿಂಪಡೆದಿದ್ದು, ಅದನ್ನು ವಿನಮಯ ಮಾಡಿಕೊಳ್ಳುವ ಆತುರ ಬೇಡ. ನೀಡಿದ ಗಡುವಿನೊಳಗೇ ಹಣವನ್ನು ಬದಲಿಸಿಕೊಳ್ಳಲೇಬೇಕೆಂದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು (ಸೋಮವಾರ) ಹೇಳಿದರು. ಈ ಮೂಲಕ ಹಣ ಬದಲಾವಣೆಗೆ ಗಡುವು ವಿಸ್ತರಿಸುವ ಸುಳಿವು ನೀಡಿದರು.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, 2 ಸಾವಿರ ರೂಪಾಯಿ ವಿನಿಮಯಕ್ಕೆ ಸೆಪ್ಟೆಂಬರ್ 30 ರ ಗಡುವು ನೀಡಲಾಗಿದೆ. ಅಂದರೆ ಇನ್ನೂ ನಾಲ್ಕು ತಿಂಗಳು ಕಾಲಾವಕಾಶವಿದೆ. ಇಂದಿನಿಂದ ಹಣ ಬದಲಿಗೆ ಆರಂಭವಾಗಿದೆ. ಜನರು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್‌ಗಳಿಗೆ ಧಾವಿಸುವ ಅಗತ್ಯವಿಲ್ಲ. ಈ ಪ್ರಕ್ರಿಯೆಯಲ್ಲಿ ಉದ್ಭವಿಸುವ ಎಲ್ಲಾ ಸಮಸ್ಯೆಗಳ ಬಗ್ಗೆ ಆರ್​ಬಿಐ ಸೂಕ್ಷ್ಮ ಗಮನ ಹರಿಸುತ್ತದೆ ಎಂದು ತಿಳಿಸಿದರು.

ಯಾವುದೇ ಮೌಲ್ಯದ ಹಣವನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ರಿಸರ್ವ್ ಬ್ಯಾಂಕ್‌ನ ಕರೆನ್ಸಿ ನಿರ್ವಹಣಾ ಕಾರ್ಯಾಚರಣೆಗಳ ಭಾಗವಾಗಿದೆ. ಇದು ಕ್ಲೀನ್ ಆರ್ಥಿಕತೆ ನೀತಿಗೆ ಅನುಗುಣವಾಗಿರುತ್ತದೆ. ಎಲ್ಲ ಪ್ರಕ್ರಿಯೆಗಳು ಸುಗಮವಾಗಿ ಸಾಗಲು ಗಡುವು ನೀಡಲಾಗಿದೆ. ಈಗ ಚಲಾವಣೆಯಲ್ಲಿರುವ ಹೆಚ್ಚಿನ 2 ಸಾವಿರ ಮೌಲ್ಯದ ನೋಟುಗಳು ಸೆಪ್ಟೆಂಬರ್ 30 ರೊಳಗೆ ಆರ್‌ಬಿಐಗೆ ಹಿಂತಿರುಗಲಿವೆ ಎಂದು ದಾಸ್ ಹೇಳಿದರು.

ಈಗಾಗಲೇ ಪೆಟ್ರೋಲ್ ಪಂಪ್‌ಗಳಲ್ಲಿ 2 ಸಾವಿರದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ವಿಪರೀತವಾಗಿದೆ. ಇದಕ್ಕಾಗಿ ಇತರ ಮುಖಬೆಲೆಯ ನೋಟುಗಳ ಸಾಕಷ್ಟು ದಾಸ್ತಾನು ಮಾಡಲಾಗುತ್ತಿದೆ. ಇಂದಿನಿಂದ ಬ್ಯಾಂಕ್‌ಗಳಲ್ಲಿ ಎರಡು ಸಾವಿರದ ನೋಟುಗಳ ವಿನಿಮಯ ಆರಂಭವಾಗಿದೆ. ಜನರು ಅವಸರಿಸಬೇಕಿಲ್ಲ ಎಂದು ಸಲಹೆ ನೀಡಿದರು.

ನೋಟು ನಿರಾಕರಿಸಬೇಡಿ:2,000 ನೋಟುಗಳನ್ನು ಹಿಂಪಡೆಯಲು ಆದೇಶ ನೀಡಲಾಗಿದ್ದರೂ, ಅವುಗಳು ಈಗಲೂ ಕಾನೂನುಬದ್ಧವಾಗಿವೆ. ವ್ಯಾಪಾರದಲ್ಲಿ ಈ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಬಾರದು. ಕಾಲಕಾಲಕ್ಕೆ ಆರ್​ಬಿಐ ನೋಟುಗಳನ್ನು ಹಿಂಪಡೆದು, ಹೊಸ ನೋಟುಗಳನ್ನು ನೀಡುವುದು ಸಾಮಾನ್ಯ. ಹೀಗಾಗಿ ನೋಟುಗಳನ್ನು ಬ್ಯಾನ್​ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಅವುಗಳನ್ನು ನಿರಾಕರಣೆ ಮಾಡಬೇಡಿ ಎಂದು ಸಲಹೆ ನೀಡಿದರು.

ವಿದೇಶದಲ್ಲಿದ್ದವರಿಗೆ ಸಮಸ್ಯೆ ಇಲ್ಲ:ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ಅನಿವಾಸಿ ಭಾರತೀಯರಿಗೆ ಹಣ ಬದಲಾವಣೆಗೆ ಸಮಯ ಬೇಕಾಗಬಹುದು. ಇದಕ್ಕೆ ಸಮಸ್ಯೆಯಾಗದಂತೆ ಆರ್​ಬಿಐ ಕ್ರಮ ಕೈಗೊಳ್ಳಲಿದೆ. ಅನೇಕ ಜನರು ವಿದೇಶದಲ್ಲಿದ್ದಾರೆ. ಅವರು ತಮ್ಮಲ್ಲಿರುವ 2 ಸಾವಿರದ ನೋಟುಗಳನ್ನು ಗಡುವಿನೊಳಗೆ ಬದಲಾಯಿಸಲು ಅಥವಾ ಠೇವಣಿ ಮಾಡಲು ಸಾಧ್ಯವಾಗದಿರಬಹುದು ಎಂದು ಹೇಳಿದ ದಾಸ್​​ ಅವರು, ಸೆಪ್ಟೆಂಬರ್ 30 ರ ಗಡುವನ್ನು ವಿಸ್ತರಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದರು.

ಆರ್ಥಿಕತೆ ಮೇಲೆ ಪರಿಣಾಮವಿಲ್ಲ:ನೋಟು ಬ್ಯಾನ್​ ಪ್ರಕ್ರಿಯೆ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2 ಸಾವಿರ ಮುಖಬೆಲೆಯ ಚಲಾವಣೆ ನಿಲ್ಲಿಸುವುದರಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಈಗಲೇ ಯಾಕೆ ನೋಟ್​ ಬ್ಯಾನ್​ ಮಾಡಲಾಗಿದೆ ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಈ ಹಿಂದೆಯೂ ಮಾಡಬಹುದಿತ್ತು. ಇದಕ್ಕೆ ನಿಖರ ಅವಧಿ ಬೇಕಿಲ್ಲ ಎಂದು ಶಕ್ತಿಕಾಂತ್​ ದಾಸ್​ ಹೇಳಿದರು.

ಇದನ್ನೂ ಓದಿ:2000 ರೂಪಾಯಿ ನೋಟುಗಳ ವಿನಿಮಯಕ್ಕೆ ಯಾವುದೇ ಐಡಿ ಕಾರ್ಡ್‌, ಅರ್ಜಿ ತುಂಬುವ ಅಗತ್ಯವಿಲ್ಲ: ಎಸ್​ಬಿಐ

Last Updated : May 22, 2023, 6:12 PM IST

ABOUT THE AUTHOR

...view details