ನವದೆಹಲಿ: ಪ್ರಮುಖ ಬೆಂಚ್ಮಾರ್ಕ್ ಬಡ್ಡಿದರ ಆಗಿರುವ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಪ್ರಸ್ತುತ ರೆಪೋದರ ಈ ಹಿಂದಿನ ಶೇ 6.5 ದರದಲ್ಲೇ ಮುಂದುವರಿಯಲಿದೆ ಹಾಗೂ ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಇದನ್ನು ಮರುಪರಿಶೀಲಿಸಲು ಆರ್ಬಿಐ ಸಿದ್ಧವಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಪ್ರಕಟಿಸಿದರು. ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ (MPC) ಸಭೆಯ ನಂತರ ಇದನ್ನು ಪ್ರಕಟಿಸಲಾಗಿದೆ.
ಅಭಿವೃದ್ಧಿಯ ಬಗ್ಗೆ ಗುರಿಯನ್ನು ಕೇಂದ್ರೀಕೃತವಾಗಿಟ್ಟುಕೊಂಡು, ಹಣದುಬ್ಬರವು ಗುರಿಯೊಂದಿಗೆ ಸಮನ್ವಯತೆ ಸಾಧಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಎಂಪಿಸಿಯ ಆರರಲ್ಲಿ ಐವರು ಸದಸ್ಯರು ರೆಪೋ ದರ ಹೆಚ್ಚಿಸದಿರಲು ವೋಟ್ ಮಾಡಿದರು ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಈ ಹಿಂದೆ ಆರು ಬಾರಿ ಸತತವಾಗಿ ರೆಪೋ ದರ ಹೆಚ್ಚಳ ಮಾಡಿದ ನಂತರ ಈ ಬಾರಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ನಿರ್ಧರಿಸಿದೆ.
ಅದರಂತೆ ಆರ್ಬಿಐ ಸ್ಥಾಯಿ ಠೇವಣಿ ಸೌಲಭ್ಯವನ್ನು (ಎಸ್ಡಿಎಫ್) 6.25 ಶೇಕಡಾ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ಮತ್ತು ಬ್ಯಾಂಕ್ ದರಗಳನ್ನು ಶೇಕಡಾ 6.75 ರಲ್ಲಿ ಬದಲಾಯಿಸದೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ತನ್ನ ಏಪ್ರಿಲ್ 3, ಏಪ್ರಿಲ್ 5 ಮತ್ತು ಏಪ್ರಿಲ್ 6 ರಂದು ತನ್ನ ಮೂರು ದಿನಗಳ ಸಭೆ ನಡೆಸಿತು. ಫೆಬ್ರವರಿ ಆರಂಭದಲ್ಲಿ ನಡೆದಿದ್ದ ಆರ್ಬಿಐನ ಹಿಂದಿನ ಎಂಪಿಸಿ ಸಭೆಯಲ್ಲಿ, ಹಣದುಬ್ಬರ ನಿರ್ವಹಿಸಲು ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ ಶೇಕಡಾ 6.5 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಇಲ್ಲಿಯವರೆಗೆ, RBI ಮೇ 2022 ರಿಂದ ರೆಪೋ ದರವನ್ನು (ಬ್ಯಾಂಕುಗಳಿಗೆ ಸಾಲ ನೀಡುವ ದರ) 250 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ.