ನವದೆಹಲಿ: ದೇಶೀಯ ಹಣದುಬ್ಬರವು ಆರ್‌ಬಿಐನ ಸೌಕರ್ಯ ಮಟ್ಟದಲ್ಲಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮುಂಬರುವ ದ್ವೈಮಾಸಿಕ ನೀತಿ ಪರಾಮರ್ಶೆಯಲ್ಲಿ ಸತತ ಮೂರನೇ ಬಾರಿಗೆ ಪ್ರಮುಖ ಬಡ್ಡಿದರಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಕಳೆದ ವರ್ಷ ಮೇ ತಿಂಗಳಿನಿಂದ ಸಾಲದ ಬಡ್ಡಿದರಗಳನ್ನು ಹೆಚ್ಚಿಸಲು ಆರಂಭಿಸಲಾಗಿತ್ತು. ಆದರೆ ಕಳೆದ ಫೆಬ್ರವರಿಯಲ್ಲಿ ಆರ್‌ಬಿಐ ರೆಪೊ ದರವನ್ನು 6.25 ಪ್ರತಿಶತಕ್ಕೆ ಹೆಚ್ಚಿಸಿದ ನಂತರ ರೆಪೊ ದರ ಅದೇ ಮಟ್ಟದಲ್ಲಿ ಉಳಿದುಕೊಂಡಿದೆ. ಏಪ್ರಿಲ್ ಮತ್ತು ಜೂನ್‌ನಲ್ಲಿ ನಡೆದ ಹಿಂದಿನ ಎರಡು ದ್ವೈಮಾಸಿಕ ನೀತಿ ಪರಾಮರ್ಶೆ ಸಭೆಗಳಲ್ಲಿ ಬೆಂಚ್‌ಮಾರ್ಕ್ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ.
ಆರ್‌ಬಿಐ ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಆಗಸ್ಟ್ 8 ರಿಂದ 10 ರವರೆಗೆ ನಡೆಯಲಿದೆ. ನೀತಿ ನಿರ್ಧಾರವನ್ನು ಆಗಸ್ಟ್ 10 ರಂದು ಗವರ್ನರ್ ಶಕ್ತಿಕಾಂತ ದಾಸ್ ಅವರು ಪ್ರಕಟಿಸಲಿದ್ದಾರೆ.
"ಆರ್‌ಬಿಐ ತನ್ನ ದರಗಳು ಮತ್ತು ನಿಲುವು ಎರಡರಲ್ಲೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಹಣದುಬ್ಬರವು ಪ್ರಸ್ತುತ ಶೇಕಡಾ 5 ಕ್ಕಿಂತ ಕಡಿಮೆಯಿದ್ದು, ಮುಂಬರುವ ತಿಂಗಳುಗಳಲ್ಲಿ ಇದು ಬದಲಾಗಬಹುದು. ತರಕಾರಿಗಳು ಮತ್ತು ಬೇಳೆಕಾಳುಗಳ ಬೆಲೆಗಳು ತೀವ್ರವಾಗಿ ಏರುತ್ತಿವೆ. ಹೀಗಾಗಿ ಬಡ್ಡಿದರಗಳಲ್ಲಿ ಯಥಾಸ್ಥಿತಿಯನ್ನು ನಿರೀಕ್ಷಿಸಲಾಗಿದೆ" ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇಕಡಾ 5.4ಕ್ಕೆ ಏರುವ ಮುನ್ಸೂಚನೆಯನ್ನು ಹೊಂದಿರುವುದರಿಂದ ಆರ್‌ಬಿಐ ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದವರೆಗೆ ರೆಪೋ ದರವನ್ನು ಬದಲಾಯಿಸುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದರು.