ನವದೆಹಲಿ:ಕೃಷಿ ವಲಯದಲ್ಲಿನ ನಿಧಾನಗತಿಯ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದ ಜುಲೈ - ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ 7.6ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಸಾಂಖಿಕ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ. ಅನಿಯಮಿತ ಮಾನ್ಸೂನ್ ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರಿದ್ದರಿಂದ ಎರಡನೇ ತ್ರೈಮಾಸಿಕದಲ್ಲಿ ಬೆಳವಣಿಗೆಯು ಮೊದಲ ತ್ರೈಮಾಸಿಕದ ಶೇಕಡಾ 7.8 ರ ಬೆಳವಣಿಗೆಗಿಂತ ಸ್ವಲ್ಪ ಕಡಿಮೆಯಾಗಿದೆ. 2023-24ರ ಮೊದಲಾರ್ಧದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಈಗ ಶೇಕಡಾ 7.7 ರಷ್ಟಾಗಿದೆ.
ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೃಷಿ ವಲಯವು ಹಿಂದಿನ ತ್ರೈಮಾಸಿಕದ ಶೇಕಡಾ 3.5 ಕ್ಕೆ ಹೋಲಿಸಿದರೆ ಕೇವಲ 1.2 ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ. ಆದಾಗ್ಯೂ, ಉತ್ಪಾದನಾ ವಲಯವು ಶೇಕಡಾ 13.9 ರಷ್ಟು ದೃಢವಾದ ಬೆಳವಣಿಗೆಯ ದರ ದಾಖಲಿಸಿದೆ. ಸೇವಾ ಕ್ಷೇತ್ರ ಮತ್ತು ಗಣಿಗಾರಿಕೆ ವಲಯಗಳು ತ್ರೈಮಾಸಿಕದಲ್ಲಿ ಉತ್ತಮವಾದ ಬೆಳವಣಿಗೆ ದಾಖಲಿಸಿವೆ.
ಚಿಲ್ಲರೆ ಹಣದುಬ್ಬರ ಇಳಿಕೆ: ಭಾರತದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟ ಶೇ 4.87ಕ್ಕೆ ಇಳಿಕೆಯಾಗಿದೆ. ಇದು ಸೆಪ್ಟೆಂಬರ್ನಲ್ಲಿ ಶೇ 5.02ರಷ್ಟಿತ್ತು. ಕುಸಿಯುತ್ತಿರುವ ಹಣದುಬ್ಬರ ಮಟ್ಟವು ಆರ್ಬಿಐನ ಮಿತಿಯ ಶೇಕಡಾ 4ರ ಗುರಿಗೆ ಹತ್ತಿರದಲ್ಲಿದೆ. ಇದು ಬಡ್ಡಿದರಗಳನ್ನು ಕಡಿತಗೊಳಿಸಲು ಅನುಕೂಲಕರವಾಗಬಹುದು.