ನವದೆಹಲಿ: ಗ್ರಾಹಕನೋರ್ವ ತನ್ನ ವೈಯಕ್ತಿಕ ಸಾಲವನ್ನು (ಪರ್ಸನಲ್ ಲೋನ್) ಸಂಪೂರ್ಣವಾಗಿ ಚುಕ್ತಾಗೊಳಿಸಿದ 30 ದಿನಗಳ ಒಳಗೆ ಆತನ ಎಲ್ಲಾ ಮೂಲ ಚರ ಮತ್ತು ಸ್ಥಿರ ಆಸ್ತಿ ದಾಖಲೆಗಳನ್ನು ಮರಳಿ ನೀಡಬೇಕೆಂದು ಆರ್‌ಬಿಐ ಕಡ್ಡಾಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಬ್ಯಾಂಕುಗಳು, ಎನ್ಬಿಎಫ್ಸಿಗಳು, (ಎಚ್ಎಫ್ಸಿಗಳು ಸೇರಿದಂತೆ), ಎಆರ್ಸಿಗಳು, ಎಲ್ಎಬಿಗಳು ಮತ್ತು ಸಹಕಾರಿ ಬ್ಯಾಂಕುಗಳು ಸೇರಿದಂತೆ ನಿಯಂತ್ರಿತ ಘಟಕಗಳು (ಆರ್‌ಇ-Regulated Entities -REs) ವೈಯಕ್ತಿಕ ಸಾಲಗಳ ಸಂಪೂರ್ಣ ಮರುಪಾವತಿ ಅಥವಾ ಇತ್ಯರ್ಥದ ನಂತರ 30 ದಿನಗಳಲ್ಲಿ ಎಲ್ಲಾ ಮೂಲ ಚರ ಮತ್ತು ಸ್ಥಿರ ಆಸ್ತಿ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಧವಾರ ನಿರ್ದೇಶನ ನೀಡಿದೆ.
ಈ ನಿರ್ದೇಶನವನ್ನು ಅನುಸರಿಸಲು ವಿಫಲವಾದರೆ, ಈ ನಿರ್ಣಾಯಕ ದಾಖಲೆಗಳ ಬಿಡುಗಡೆಯಲ್ಲಿ ಯಾವುದೇ ವಿಳಂಬ ಮಾಡಿದಲ್ಲಿ ದಿನಕ್ಕೆ 5,000 ರೂ.ಗಳ ದಂಡ ವಿಧಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಡಿಸೆಂಬರ್ 1, 2023 ರಿಂದ ಜಾರಿಗೆ ಬರಲಿರುವ ಈ ಕ್ರಮವು ಸಾಲಗಾರರ ಹಕ್ಕುಗಳನ್ನು ರಕ್ಷಿಸುವ ಮತ್ತು ಸಾಲ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿ ಹೊಂದಿದೆ.
"2003 ರಿಂದ ವಿವಿಧ ನಿಯಂತ್ರಿತ ಘಟಕಗಳಿಗೆ (ಆರ್‌ಇ) ನೀಡಲಾದ ನ್ಯಾಯೋಚಿತ ಆಚರಣೆಗಳ ಸಂಹಿತೆಯ ಮಾರ್ಗಸೂಚಿಗಳ ಪ್ರಕಾರ, ಆರ್ಇಗಳು ಸಂಪೂರ್ಣ ಮರುಪಾವತಿ ಮತ್ತು ಸಾಲ ಖಾತೆಗಳನ್ನು ಮುಚ್ಚಿದ ನಂತರ ಎಲ್ಲಾ ಚರ ಮತ್ತು ಸ್ಥಿರ ಆಸ್ತಿ ದಾಖಲೆಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಆದಾಗ್ಯೂ, ಅಂತಹ ಚರ ಮತ್ತು ಸ್ಥಿರ ಆಸ್ತಿ ದಾಖಲೆಗಳ ಬಿಡುಗಡೆಯಲ್ಲಿ ಆರ್ಇಗಳು ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿವೆ. ಇದು ಗ್ರಾಹಕರಿಗೆ ಅನಾನುಕೂಲ ಮತ್ತು ಸಮಸ್ಯೆಗಳನ್ನು ಉಂಟು ಮಾಡುತ್ತದೆ" ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.