ನವದೆಹಲಿ: ಕಬ್ಬಿನ ಉಪ ಉತ್ಪನ್ನವಾದ ಕಾಕಂಬಿಯ (ಮೊಲಾಸಿಸ್) ಮೇಲೆ ಕೇಂದ್ರ ಸರಕಾರವು ಶೇ 50ರಷ್ಟು ರಫ್ತು ಸುಂಕ ವಿಧಿಸಿದೆ. ಈ ನಿಯಮ ಜನವರಿ 18ರಿಂದ ಜಾರಿಗೆ ಬರಲಿದೆ. ಆಲ್ಕೋಹಾಲ್ ಉತ್ಪಾದಿಸಲು ಕಾಕಂಬಿಯನ್ನು ಒಂದು ಮೂಲ ವಸ್ತುವಾಗಿ ಬಳಸಲಾಗುತ್ತದೆ.
ವಾಹನಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪೆಟ್ರೋಲ್ನೊಂದಿಗೆ ಎಥೆನಾಲ್ (ಆಲ್ಕೋಹಾಲ್) ಬೆರೆಸಲಾಗುತ್ತದೆ. ಈ ಎಥೆನಾಲ್ ಉತ್ಪಾದನೆಗೆ ಕಾಕಂಬಿಯೇ ಪ್ರಮುಖ ವಸ್ತುವಾಗಿದೆ. ಹೀಗಾಗಿ ಎಥೆನಾಲ್ ಉತ್ಪಾದನೆಗೆ ದೇಶದಲ್ಲಿ ಸಾಕಷ್ಟು ಪ್ರಮಾಣದ ಕಾಕಂಬಿ ಲಭ್ಯವಿರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಈಗ ಅದರ ಮೇಲೆ ಶೇ 50ರಷ್ಟು ರಫ್ತು ಸುಂಕ ವಿಧಿಸಿದೆ. ಇದಲ್ಲದೆ ಔಷಧ ತಯಾರಿಕೆಗಾಗಿಯೂ ಕಾಕಂಬಿ ಪ್ರಮುಖವಾಗಿ ಬೇಕಾಗುತ್ತದೆ.
ಅನಿಶ್ಚಿತ ಮಾನ್ಸೂನ್ ಕಾರಣದಿಂದಾಗಿ ಪ್ರಸಕ್ತ ಋತುವಿನಲ್ಲಿ ದೇಶೀಯ ಕಬ್ಬಿನ ಉತ್ಪಾದನೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಬಹುದು ಎಂಬ ಆತಂಕ ಮೂಡಿದೆ. ಹೀಗಾಗಿ ದೇಶದಲ್ಲಿ ಕಾಕಂಬಿಯ ಕೊರತೆಯನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ. ಜೈವಿಕ ಇಂಧನ ನೀತಿಯನ್ನು ಉತ್ತೇಜಿಸುವ ಭಾಗವಾಗಿ 2025-26ರ ವೇಳೆಗೆ E20 ಅಂದರೆ ಶೇಕಡಾ 12 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.