ಮುಂಬೈ: ಅಪಘಾತದಿಂದ ದೇಹದೊಳಗೆ ಉಂಟಾದ ಗಂಭೀರ ಆಂತರಿಕ ಗಾಯದಿಂದ ಸೈರಸ್ ಮಿಸ್ತ್ರಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಪಾಲಿಟ್ರೌಮಾ ಎನ್ನುತ್ತಾರೆ. ಇದರಿಂದ ಮಿಸ್ತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸೈರಸ್ ಮತ್ತು ಜಹಾಂಗೀರ್ ಇವರ ಮರಣೋತ್ತರ ಪರೀಕ್ಷೆಯು ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ ನಡೆಯಿತು. ಪರೀಕ್ಷಾ ವರದಿಯು ಇದೀಗ ಲಭ್ಯವಾಗಿದೆ.
ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. ಗುಜರಾತ್‌ನ ಉದ್ವಾಡದಲ್ಲಿ ನಿರ್ಮಿಸಲಾದ ಪಾರ್ಸಿ ದೇವಾಲಯದಿಂದ ಅವರು ಹಿಂತಿರುಗುತ್ತಿದ್ದರು. 54 ವರ್ಷದ ಮಿಸ್ತ್ರಿ ಅವರ ಮರ್ಸಿಡಿಸ್ ಜಿಎಲ್‌ಸಿ 220 ಕಾರು ಮಹಾರಾಷ್ಟ್ರದ ಪಾಲ್ಘರ್ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ (49) ಸಾವನ್ನಪ್ಪಿದ್ದು, ಕಾರು ಚಲಾಯಿಸುತ್ತಿದ್ದ ವೈದ್ಯೆ ಅನಹಿತಾ ಪಾಂಡೋಲೆ ಮತ್ತು ಆಕೆಯ ಪತಿ ಡೇರಿಯಸ್ ಪಾಂಡೋಲೆ ಗಾಯಗೊಂಡಿದ್ದಾರೆ.